

ವಿಜಯಪುರ: ಹಿತಮಿತವಾದ ಆಹಾರ ಪದ್ಧತಿ, ಸಮುದಾಯದೊಂದಿಗೆ ಒಂದಾಗುವುದು ಮತ್ತು ನಿತ್ಯ ಜೀವನದಲ್ಲಿ ವ್ಯಾಯಾಮ ಅಳವಡಿಸಿಕೊಳ್ಳುವುದರಿಂದ ದೀರ್ಘಾಯುಷಿಗಳಾಗಿ ಬದುಕಲು ಸಾಧ್ಯವಿದೆ ಎಂದು ಡಾ. ವಿ.ಡಿ. ಐಹೊಳ್ಳಿ ಹೇಳಿದರು.
ರೋಟರಿ ಕ್ಲಬ್ ಉತ್ತರ ವಲಯದ ವತಿಯಿಂದ ನಗರದ ಅಖಿಲ ಭಾರತ ವೀರಶೈವ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.
ಜಪಾನ್ನ ಒಕನಾಮಾದ ದ್ವೀಪದಲ್ಲಿರುವ ಸಾವಿರಕ್ಕೆ ಎರಡುನೂರ ಐವತ್ತು ಜನರು ನೂರು ವರ್ಷ ಬದುಕುತ್ತಾರೆ. ಅದಕ್ಕೆ ಮುಖ್ಯ ಕಾರಣ ಆಹಾರ ಪದ್ಧತಿ, ಸಮುದಾಯದ ಜತೆಗೆ ಸೇರುವುದು ಮತ್ತು ತಪ್ಪದೇ ವ್ಯಾಯಾಮ ಮಾಡುವ ಮೂಲಕ ದೀರ್ಘಾಯುಷಿಗಳಾಗಿ ಬದುಕುತ್ತಿದ್ದಾರೆ. ಮಾನಸಿಕ ನೆಮ್ಮದಿ, ನಂಬಿಕೆ, ಶಾಂತಿ, ಸಮಾಧಾನ, ಪರಸ್ಪರ ಸಹಾಯ ಮಾಡುವುದು, ಸತ್ಕಾರ, ಮಂದಹಾಸ ಬೀರುವುದು, ಒಳ್ಳೆಯವರ ಜತೆಗೆ ಒಡನಾಟ ಮಾಡುವುದರಿಂದ ನಾವೂ ಕೂಡ ಅವರಂತೆ ಶತಾಯುಷಿಗಳಾಗಲೂ ಸಾಧ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾರದಾ ಐಹೊಳ್ಳಿ ತಾಯಂದಿರ ದಿನದ ಮಹತ್ವ ತಿಳಿಸಿ, ನಾವು ಬದುಕುವ ನಿಯಮಗಳನ್ನು ಪಾಲಿಸದೇ ಹೋದರೆ ನಾವು ನಿಧಾನವಾಗಿ ಸಾಯಲು ಪ್ರಾರಂಭಿಸುತ್ತೇವೆ ಎಂದು ಹೇಳಿದರು.
ಕಾಯಕಯೋಗಿ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ವಿ.ಸಿ. ನಾಗಠಾಣ ಅವರನ್ನು ಸನ್ಮಾನಿಸಲಾಯಿತು. ಸುಭಾಸ ಬೇಟಗೇರಿ ಸ್ವಾಗತಿಸಿ ಪರಿಚಯಿಸಿದರು. ಮಹಾದೇವ ಹಾಲಳ್ಳಿ ನಿರೂಪಿಸಿದರು. ಸುವರ್ಣಾ ತೇಲಿ ವಂದಿಸಿದರು.
ಆರ್.ಎಸ್. ಭೋವಿ, ಎನ್.ಆರ್. ಬ್ಯಾಕೋಡ, ಎಂ.ಎಲ್. ಮದಭಾವಿ, ಎಸ್.ಟಿ. ಬಗಲಿ, ಎಸ್.ಎಸ್. ಗಜಕೋಶ, ಡಾ. ವೈ.ಬಿ. ಪಟ್ಟಣಶೆಟ್ಟಿ, ಡಾ. ಎನ್.ಸಿ. ಹಿರೇಮಠ, ಎಂ.ಆರ್. ಬಾಗಿ, ಕವೀಂದ್ರ ಸಾತಿಹಾಳ, ಜಗದೀಶ ಮೋಟಗಿ, ಬಿ.ವೈ. ಪಾಟೀಲ, ಬಿ.ಎಸ್. ಮೋದಿ, ಬಿ.ಎಂ. ಜುಮನಾಳ, ಶಶಿಕಲಾ ಇಜೇರಿ, ಪುಷ್ಪಾ ಮಹಾಂತಮಠ, ವಿದ್ಯಾ ಕೊಟೆನ್ನವರ, ಎಸ್.ಜಿ. ದೇವೂರ, ತೋಟಪ್ಪ ವಾಲಿ, ಸೋಮಶೇಖರ ಬಳ್ಳೊಳ್ಳಿ ಮತ್ತಿತರರಿದ್ದರು.