

ಕೆ.ಸಂಜೀವ ಆರ್ಡಿ
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳು, ಗುಣಮಟ್ಟದ ಶಿಕ್ಷಣಕ್ಕೆ ಅವಕಾಶವಿದ್ದರೂ ಇತ್ತೀಚಿನ ವರ್ಷಗಳಲ್ಲಿ ವಿವಿಧ ಕಾರಣಗಳಿಂದಾಗಿ ಮಕ್ಕಳ ದಾಖಲಾತಿ ಇಳಿಮುಖವಾಗುತ್ತಿದೆ. ಆರ್ಡಿ ಸಮೀಪದ ಕೊಂಜಾಡಿ (ಕಲ್ಮರ್ಗಿ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಇತರ ಶಾಲೆಗಳಿಗೆ ಮಾದರಿಯಾಗಿದೆ.
ಶಾಲೆಯಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳ ಸಹಕಾರದೊಂದಿಗೆ ಮಕ್ಕಳ ದಾಖಲಾತಿ ಹೆಚ್ಚಿಸುವ ಕುರಿತು ಪ್ರಥಮ ಹಂತದಲ್ಲಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಪಾಲಕರು, ಮಕ್ಕಳೊಂದಿಗೆ ಸಮಾಲೋಚನಾ ಸಭೆ, ಶಾಲಾ ವ್ಯಾಪ್ತಿಯ ಕಲ್ಮರ್ಗಿ, ತೂಂಬಿನಕೆರೆ, ಬರೆಗದ್ದೆ, ಅಲ್ಬಾಡಿ, 9ನೇ ಮೈಲ್‌ಕಲ್ಲು, ಕೂಸಿನತೋಟ, ಐದು ಸೆಂಟ್ಸ್(ಜನತಾ ಕಾಲೋನಿ), ತೊನ್ನಾಸೆ ಸುತ್ತ ಮುತ್ತಲಿನ ಭಾಗಗಳಲ್ಲಿ ಮನೆ-ಮನೆಗಳಿಗೆ ಭೇಟಿ ನೀಡಿ, ಶಾಲೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಮಕ್ಕಳ ಪಾಲಕರ ಮನವೊಲಿಸಲಾಗಿದೆ. ವಿನೂತನ ಸೌಲಭ್ಯಗಳ ಕಾರ್ಯಕ್ರಮಗಳನ್ನು ಹಿಂದಿನ ವರ್ಷಗಳಂತೆ ಈ ಶೈಕ್ಷಣಿಕ ವರ್ಷವೂ ನೀಡಲಾಗುತ್ತಿದೆ.
*ಉಚಿತ ಸೌಲಭ್ಯಗಳು: ದಾನಿಗಳ ಸಹಕಾರದಲ್ಲಿ ಮಕ್ಕಳಿಗೆ ಉಚಿತ ವಾಹನ ವ್ಯವಸ್ಥೆ, ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್, ಕ್ರೀಡಾ ಸಮವಸ್ತ್ರ, ಕ್ರೀಡಾಸೌಲಭ್ಯಗಳು, ಶೈಕ್ಷಣಿಕ ಪ್ರವಾಸ, ಶಾಲಾ ವಾರ್ಷಿಕೋತ್ಸವ, ತರಕಾರಿ, ಶಾಲೆಯಲ್ಲಿ ಹೂದೂಟ ನಿರ್ಮಾಣ, ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ಸೌಲಭ್ಯಗಳು, ವಿನೂತನ ಮಾದರಿ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.
ಮುಖ್ಯಶಿಕ್ಷಕ ನಾರಾಯಣ ನಾಯ್ಕ, ಸಹ ಶಿಕ್ಷಕಿ ಶಶಿಕಲಾ ಶೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಇನ್ನಷ್ಟು ಪ್ರಗತಿ, ಮಕ್ಕಳ ದಾಖಲಾತಿ ಏರಿಕೆಯಾಗ ಬೇಕು ಎನ್ನುವುದು ಹಳೇ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕ ವರ್ಗದವರ ಗುರಿಯಾಗಿದೆ.
ಕಾಯಂ ಶಿಕ್ಷಕರ ನೇಮಕ
ಕೊಂಜಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1959ರಲ್ಲಿ ಆರಂಭಗೊಂಡು ಸಾವಿರಾರು ಮಕ್ಕಳ ವಿದ್ಯಾಭ್ಯಾಸಕ್ಕೆ ವರದಾನವಾಗಿತ್ತು, ಕಾಲ ಕ್ರಮೇಣ ಶಾಲೆಯಲ್ಲಿ ಕಾಯಂ ಶಿಕ್ಷಕರಿಲ್ಲದೆ ಮಕ್ಕಳು ಹೊರ ಭಾಗದ ಖಾಸಗಿ, ಸರ್ಕಾರಿ ಶಾಲೆಗಳತ್ತ ಮುಖಮಾಡಿದರು. ಇದರಿಂದಾಗಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗ ತೊಡಗಿತು. 2016-17ರ ಶೈಕ್ಷಣಿಕ ಸಾಲಿನ ಆರಂಭದಲ್ಲಿ ಶಿಕ್ಷಣ ಇಲಾಖೆಯಿಂದ ಕಾಯಂ ಶಿಕ್ಷಕಿಯ ನೇಮಕ, ಬಳಿಕ ಮುಖ್ಯ ಶಿಕ್ಷಕರ ನೇಮಕವಾಯಿತು. ಶಾಲೆ ಉಳಿಸಬೇಕೆಂದು ಸಂಕಲ್ಪಿಸಿದ ಎಸ್‌ಡಿಎಂಸಿ, ಸ್ಥಳೀಯರು, ಹಳೇ ವಿದ್ಯಾರ್ಥಿಗಳು ದಾನಿಗಳ ಸಹಕಾರದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಕೈಗೊಂಡರು. ಅದರ ಫಲವಾಗಿ 13 ಮಂದಿ ಇದ್ದ ವಿದ್ಯಾರ್ಥಿಗಳ ಸಂಖ್ಯೆ 25ಕ್ಕೆ ಹೆಚ್ಚಿದೆ.
ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳು, ಹಳೇ ವಿದ್ಯಾರ್ಥಿಗಳು, ಎಸ್‌ಡಿಎಂಸಿ, ಶಿಕ್ಷಕ ವೃಂದದವರ ಸಹಕಾರದಲ್ಲಿ ಶಾಲೆಯ ಪ್ರಗತಿಗಾಗಿ ಶ್ರಮಿಸಲಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಅವಕಾಶವಿದೆ. ಉಚಿತ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು.ಪಾಲಕರು ಮಕ್ಕಳನ್ನು ಶಾಲೆಗೆ ದಾಖಲಿಸುವುದರೊಂದಿಗೆ ಶಾಲೆಯ ಪ್ರಗತಿಯಲ್ಲಿ ಸಹಕರಿಸಬೇಕು. -ಪ್ರಸಾದ್ ತೊನ್ನಾಸೆ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಮಕ್ಕಳ ಭವಿಷ್ಯ ರೂಪಿಸಲು ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವಲ್ಲಿ ಸರ್ಕಾರಿ ಸೌಲಭ್ಯಗಳೊಂದಿಗೆ ದಾನಿಗಳ ಸಹಕಾರದೊಂದಿಗೆ ವಿವಿಧ ಸೌಲಭ್ಯಗಳು, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. -ನಾರಾಯಣ ನಾಯ್ಕ, ಮುಖ್ಯಶಿಕ್ಷಕ https://www.vijayavani.net/children-need-a-good-learning-environment https://www.vijayavani.net/gantihole-demands-fulfillment-of-civic-employees-demands