ಮಾದರಿ ಗ್ರಾಮಕ್ಕಾಗಿ ಯೋಜನೆ ರೂಪಿಸಿ

1manju12-Web
Published on

ಬೆಳಗಾವಿ: ಗ್ರಾಮಸ್ಥರ ಜೀವನ ಮಟ್ಟ ಹೆಚ್ಚಿಸುವ ಶ್ಯಾಮ ಪ್ರಸಾದ ಮುಖರ್ಜಿ ರುರ್ಬನ್ ಅಭಿಯಾನದಡಿ ಆಯ್ಕೆಯಾಗಿರುವ ಕಂಗ್ರಾಳಿ ಕ್ಲಸ್ಟರ್ ವ್ಯಾಪ್ತಿಯಲ್ಲಿನ ಒಂದು ಗ್ರಾಮವನ್ನು ಮಾದರಿಯನ್ನಾಗಿ ನಿರ್ಮಿಸಿ ವರದಿ ಸಲ್ಲಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಗ್ರಾಮೀಣಾಭಿವೃದ್ಧಿ ಕೋಶ ರುರ್ಬನ್ (ಎನ್‌ಆರ್‌ಯುಎಂ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಹಳ್ಳಿಯ ವಾತಾವರಣವನ್ನೂ ಉಳಿಸಿ ಪಟ್ಟಣದಲ್ಲಿರುವಂತೆ ಆಧುನಿಕ ಸೌಲಭ್ಯ ಕಲ್ಪಿಸುವುದು ಎನ್‌ಆರ್‌ಯುಎಂ ಗುರಿ. ಹೀಗಾಗಿ ಸಮರ್ಪಕವಾಗಿ ಈ ಅಭಿಯಾನ ಅನುಷ್ಠಾನಗೊಳಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದರು.

ಈಗಾಗಲೇ ಹಳ್ಳಿಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅನೇಕ ಸೌಲಭ್ಯಗಳಿವೆ. ಆದರೆ, ಇನ್ನೂ ಹಲವು ಸೌಲಭ್ಯಗಳ ಕೊರತೆ ಇದೆ. ಕೊರತೆ ಇರುವ ಸೌಲಭ್ಯ ಕಲ್ಪಿಸಲು ಅಭಿಯಾನ ಅನುಷ್ಠಾನಗೊಳಿಸಬೇಕು. ಈ ವಿಷಯದಲ್ಲಿ ಅನುದಾನ ಕೊರತೆ ಇತರ ಸಮಸ್ಯೆ ಮುಂದಿಟ್ಟುಕೊಂಡು ವಿಳಂಬ ಮಾಡಬಾರದು ಎಂದು ಸಲಹೆ ನೀಡಿದರು.

ಅನುದಾನ ಬಿಡುಗಡೆ: 2016-17ನೇ ಸಾಲಿನಲ್ಲಿ ಶ್ಯಾಮ ಪ್ರಸಾದ ಮುಖರ್ಜಿ ರುರ್ಬನ್ ಅಭಿಯಾನ ಆರಂಭವಾಗಿದೆ. ಬೆಳಗಾವಿ ತಾಲೂಕಿನ ಕಂಗ್ರಾಳಿ ಕ್ಲಸ್ಟರ್ ವ್ಯಾಪ್ತಿಯಲ್ಲಿ ಕಂಗ್ರಾಳಿ ಬಿ.ಕೆ., ಕಂಗ್ರಾಳಿ ಕೆ.ಎಚ್., ಮಂಡೋಳಿ ಮತ್ತು ಅಂಬೇವಾಡಿ ಗ್ರಾಮಗಳು ಅಭಿಯಾನಕ್ಕೆ ಆಯ್ಕೆಯಾಗಿವೆ. ಅಭಿಯಾನ ಅನುಷ್ಠಾನಗೊಳಿಸಲು ಮೊದಲ ಹಂತದಲ್ಲಿ 452.95 ಕೋಟಿ ರೂ. ಈಗಾಗಲೇ ಅನುದಾನ ಬಿಡುಗಡೆ ಆಗಿದೆ. ಆದರೆ, ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಂಡಿಲ್ಲ ಎಂದು ಸಚಿವ ಅಂಗಡಿ ಹೇಳಿದರು.

ಜು. 10ರ ಗಡುವು: ಜಿಪಂ ಸಿಇಒ ಡಾ .ಕೆ.ವಿ. ರಾಜೇಂದ್ರ ಮಾತನಾಡಿ, ಅಭಿಯಾನದಡಿ ಆಯ್ಕೆಯಾಗಿರುವ ಗ್ರಾಮಗಳ ಸಮಗ್ರ ಅಭಿವೃದ್ಧಿ ಯೋಜನೆಯ ವರದಿಯನ್ನು ಜು. 10ರ ಒಳಗಾಗಿ ಸಲ್ಲಿಸಬೇಕು. ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗಳು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಅಲ್ಲದೆ, ಚರಂಡಿ ನೀರು ಯಾವುದೇ ಕಾರಣಕ್ಕೂ ಕೆರೆ, ಹಳ್ಳ ಮತ್ತು ನದಿಗಳಿಗೆ ಸೇರಬಾರದು. ಈ ನೀರು ಮರು ಬಳಕೆಗಾಗಿ ಎಸ್‌ಟಿಪಿ ಘಟಕ ನಿರ್ಮಿಸಬೇಕು. ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ತಕ್ಷಣ ಸಲ್ಲಿಸಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರುಶರಾಮ ದುಡಗುಂಟಿ, ಯೋಜನಾ ನಿರ್ದೇಶಕ ಎ.ಎಂ. ಪಾಟೀಲ, ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಿ

ಹಳ್ಳಿಗಳಲ್ಲಿ ಕೊಳಚೆ ನೀರು ಕೆರೆ, ಹಳ್ಳ ಮತ್ತು ನದಿಗಳಿಗೆ ಸೇರದಂತೆ ಮುಂಜಾಗ್ರತಾ ಕ್ರಮ ವಹಿಸಿ. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆಯಾಗಬೇಕು. ಕರೊನಾ ವೈರಸ್ ಸೋಂಕಿನಿಂದಾಗಿ ನಗರ ಪ್ರದೇಶಗಳಲ್ಲಿನ ಜನರು ಹಳ್ಳಿಗಳಿಗೆ ವಾಪಸ್ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಳ್ಳಿಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯಲಿವೆ. ಹಾಗಾಗಿ ಮುಂದಿನ 30 ವರ್ಷಗಳ ಅಭಿವೃದ್ಧಿ ವಿಚಾರವಾಗಿ ಈಗಿನಿಂದಲೇ ಯೋಜನೆ ತಯಾರಿಸಬೇಕು ಎಂದು ಸಚಿವ ಸುರೇಶ ಅಂಗಡಿ ಅಧಿಕಾರಿಗಳಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net