

ಜೆ.ಜಿ.ಶ್ರೀನಿವಾಸಮೂರ್ತಿ ಬೇತಮಂಗಲ: ಸರ್ಕಾರಿ ಸೌಲಭ್ಯಗಳು ಅರ್ಹರಿಗೆ ತಲುಪದೆ ಯೋಜನೆಗಳು ಹಳ್ಳ ಹಿಡಿಯುವುದೇ ಹೆಚ್ಚು. ಆದರೆ, ಇದಕ್ಕೆ ಅಪವಾದ ಎಂಬಂತೆ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ಎಲ್ಲರಿಗೂ ಮಾದರಿಯಾಗಿದೆ.
ನರೇಗಾ ಯೋಜನೆಯಡಿ ಪಂಚಾಯಿತಿಯ ಭವ್ಯ ಕಟ್ಟಡ ಸೇರಿ ವಾರ್ಷಿಕ ದಾಖಲೆ 2 ಕೋಟಿ ರೂ. ಅನುದಾನ ಬಳಸಿಕೊಂಡು ಅಭಿವೃದ್ಧಿ ಜತೆಗೆ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿರುವುದೇ ಇದಕ್ಕೆ ನಿದರ್ಶನವಾಗಿದೆ.
ಪಂಚಾಯಿತಿ ಆಡಳಿತ ಮಂಡಳಿಯ ಎಲ್ಲರೂ ಒಗ್ಗಟ್ಟಿನಲ್ಲೇ ಅಭಿವೃದ್ಧಿಯ ಪರ್ವ ಬರೆದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಅನುದಾನದಲ್ಲಿ ಸಂಪೂರ್ಣ ಮೂಲಸೌಲಭ್ಯ ಕಲ್ಪಿಸಲು ಸದ್ಬಳಸಿಕೊಂಡಿದ್ದಾರೆ.
ಕೆಜಿಎ್ ತಾಲೂಕಿನ 15 ಗ್ರಾಮ ಪಂಚಾಯಿತಿಗಳ ಪೈಕಿ ಟಿ.ಗೊಲ್ಲಹಳ್ಳಿ ಪಂಚಾಯಿತಿ ನರೇಗಾ ಯೋಜನೆಯಲ್ಲಿ ಅತ್ಯಂತ ಹೆಚ್ಚು ಕಾಮಗಾರಿ ಕೈಗೊಂಡಿದೆ. ಆ ಪೈಕಿ ಹಳೇ ಕಚೇರಿ ಕಟ್ಟಡದ ಮೇಲೆ ನೂತನವಾಗಿ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ನರೇಗಾ ಯೋಜನೆಯಲ್ಲಿ ಜಿಲ್ಲೆಯಲ್ಲೆ 25 ಲ ರೂ.ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಮಾ.12ರಂದು ಕ್ಷೇತ್ರದ ಶಾಸಕಿ ರೂಪಕಲಾ ನೂತನ ಕೊಠಡಿ ಉದ್ಘಾಟನೆಗೊಳಿಸಿದ್ದಾರೆ.
ಶಾಲೆಗಳ ಪ್ರಗತಿಗೆ ಒತ್ತು
ಗ್ರಾಪಂ ವ್ಯಾಪ್ತಿಯ ಬಹುತೇಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ ಪಂಚಾಯಿತಿ, ಐಸಂದ್ರ ಮಿಟ್ಟೂರು ಸರ್ಕಾರಿ ಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ 5 ಲ ರೂ., ಹಾಗೂ ಒಂದೂವರೆ ಲ ರೂ. ವೆಚ್ಚದಲ್ಲಿ ಶೌಚಗೃಹ, ಕಳ್ಳಿಕುಪ್ಪ ಶಾಲೆಯ ಕಾಂಪೌಂಡ್ ಮತ್ತು ಶೌಚಗೃಹ ನಿಮಾಣಕ್ಕೆ 10 ಲ ರೂ., ಜಯಮಂಗಳ ಶಾಲೆ ಆವರಣದಲ್ಲಿ 7 ಲಕ್ಷ ರೂ. ವೆಚ್ಚದಲ್ಲಿ ಅಡುಗೆ ಮನೆ ಮತ್ತು ಶೌಚಗೃಹ, ಬಡಮಾಕನಹಳ್ಳಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಾಂಪೌಂಡ್ ನಿರ್ಮಾಣಕ್ಕೆ 13 ಲ, ಮಾದಮುತ್ತನಹಳ್ಳಿ, ಕಂಗಾನಲ್ಲೂರು, ಚಿಗರಾಪುರಾ ಶಾಲೆಗಳ ಕಾಂಪೌಂಡ್ ನಿರ್ಮಾಣಕ್ಕೆ ತಲಾ 5ಲ ರೂ., ಚಿಗರಾಪುರ ಬಳಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಸುಮಾರು 20 ಲ ರೂ. ವೆಚ್ಚದಲ್ಲಿ ಪಾರ್ಕ್ ಮತ್ತು ಬ್ಯಾಸ್ಕೆಟ್ ಬಾಲ್ ಕೋರ್ಟ್ ನಿರ್ಮಿಸುವ ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 2 ಕೋಟಿ ರೂ. ವೆಚ್ಚ ಮಾಡಿದೆ. ಇದೊಂದು ಅಭಿವೃದ್ಧಿಯ ಮೈಲಿಗಲ್ಲಾಗಿದೆ.
ಪುರಸ್ಕಾರಕ್ಕೆ ಆಯ್ಕೆ
ಸರ್ಕಾರಗಳ ಅನುದಾನ ಸಮರ್ಪಕವಾಗಿ ಬಳಕೆ ಮಾಡಿಕೊಂಡು ಎಲ್ಲ ಗ್ರಾಮಗಳಲ್ಲೂ ಕುಡಿಯುವ ನೀರು, ಬೀದಿದೀಪ, ಚರಂಡಿ, ರಾಜಕಾಲುವೆ ನಿರ್ಮಾಣ ಮಾಡುವ ಮೂಲಕ ದಾಖಲೆಗಳ ನಿರ್ವಹಣೆ,ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿ 2024 &25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಭಾಜನವಾಗಿರುವುದು ವಿಶೇಷ.
ಒಗ್ಗಟ್ಟಿನ ಮಂತ್ರ
ಕಳೆದ 2 ವರ್ಷದ ಹಿಂದೆ ಚುನಾವಣೆ ಮೂಲಕ ಆಯ್ಕೆಯಾದ ಅಧ್ಯಕ್ಷ ಮಂಜುನಾಥ್, ಉಪಾಧ್ಯೆ ತುಳಸಮ್ಮ ಅವರು ಎಲ್ಲ ಸದಸ್ಯರೂ ಹಾಗೂ ಅಧಿಕಾರಿಗಳು, ಸಿಬ್ಬಂದಿಯೊಂದಿಗೆ ಒಗ್ಗಟ್ಟು, ಅಭಿವೃದ್ಧಿಯ ಗುಟ್ಟು ಎನ್ನುವ ರೀತಿಯಲ್ಲಿ ಅಭಿವೃದ್ಧಿಯ ಪರ್ವ ಬರೆದಿದ್ದಾರೆ.
"ಎಲ್ಲ ಸದಸ್ಯರ ಸಹಕಾರದಿಂದ ಸುಮಾರು 5 ಕೋಟಿ ರೂ. ಅನುದಾನದಲ್ಲಿ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗಿದೆ. ವಿಶೇಷವಾಗಿ ನರೇಗಾದಡಿ ಮೂಲ ಸೌಲಭ್ಯ ಒದಗಿಸಲಾಗಿದೆ. ಪಂಚಾಯಿಯ ಹಳೇ ಕಟ್ಟಡದಲ್ಲೇ ನವೀಕರಣ ಮೂಲಕ ಎಲ್ಲ ಸದಸ್ಯರ ಸರ್ವಾನುಮತದಿಂದ 25 ಲ ರೂ. ವೆಚ್ಚದಲ್ಲಿ ಸಭಾಂಗಣ ಸೇರಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ನಮ್ಮ ಕೆಲಸಗಳನ್ನು ನೆಚ್ಚಿ ಗಾಂಧಿ ಗ್ರಾಮ ಪುರಸ್ಕಾರವೂ ಲಭಿಸಿದ್ದು, ಸಂತೋಷ ಹೆಚ್ಚಿಸಿದೆ."
- ಮಂಜುನಾಥ್
ಅಧ್ಯಕ್ಷ ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ
"ಪಂಚಾಯಿತಿಯ ಎಲ್ಲರ ಕ್ಷೇತ್ರಗಳ ಅಭಿವೃದ್ಧಿ ಆಗಬೇಕು ಎಂಬ ದೃಷ್ಟಿಯಿಂದ ಸಾಕಷ್ಟು ಕಾಮಗಾರಿ ಕೈಗೊಳ್ಳುವ ಮೂಲಕ ಗ್ರಾಮಗಳ ಅಭಿವೃದ್ಧಿ ಆಗುತ್ತಿದೆ. ಮತ್ತೊಂದೆಡೆ ಅಧ್ಯಕ್ಷ, ಉಪಾಧ್ಯೆ ಸೇರಿ ಎಲ್ಲ ಸದಸ್ಯರ ಹಾಗೂ ನಮ್ಮ ಅಧೀನದ ಸಿಬ್ಬಂದಿ ಮತ್ತು ಮೇಲಾಧಿಕಾರಿಗಳ ಸಹಕಾರದಿಂದ ಎಲ್ಲ ಯೋಜನೆಗಳನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದೆ."
- ಶ್ರೀನಿವಾಸಮೂರ್ತಿ
ಪಿಡಿಒ, ಟಿ ಗೊಲ್ಲಹಳ್ಳಿ ಗ್ರಾಪಂ