ಮಾದರಿಯಾದ ರಾಮೇನಹಳ್ಳಿ ಸರ್ಕಾರಿ ಶಾಲೆ

MDG VISIT
Published on

ಮುಂಡರಗಿ: ಪಟ್ಟಣದ ರಾಮೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಬೆಂಗಳೂರು ಆರ್​ಐಇ ವಿಭಾಗದ ನಿರ್ದೇಶಕ ಕೆ.ಎಸ್. ಮಣಿ ಹಾಗೂ ಇನ್ನಿತರ ಶಿಕ್ಷಣ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಭೇಟಿ ನೀಡಿ ಸಮುದಾಯದ ಸಹಕಾರದಲ್ಲಿ ಅಭಿವೃದ್ಧಿ ಪಡಿಸಿದ ಮಕ್ಕಳ ಸ್ನೇಹಿ ಕಲಿಕಾ ವಾತಾವರಣ, ವಿಷಯಾಧಾರಿತ ಕಲಿಕಾ ತರಗತಿ ಕೋಣೆಗಳು, ತೆರೆದ ವಾಚನಾಲಯ ಹಾಗೂ ಮಕ್ಕಳ ರಂಗವೇದಿಕೆ ಪರಿಶೀಲಿಸಿದರು. ಹಾಗೆಯೇ ಮಕ್ಕಳು ಕಲಿಕೆಯಲ್ಲಿ ಲವಲವಿಕೆಯಿಂದ ಭಾಗಿಯಾಗಿರುವುದರ ಕುರಿತು ರ್ಚಚಿಸಿದರು.

ಈ ವೇಳೆ ಆರ್​ಐಇ ವಿಭಾಗದ ನಿರ್ದೇಶಕ ಕೆ.ಎಸ್. ಮಣಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆಗೆ ಪೂರಕವಾಗಿ ಮಕ್ಕಳ ಮನಸ್ಸನ್ನು ಸೆಳೆದು, ಸ್ವ ಕಲಿಕೆಗೆ ಸ್ಪೂರ್ತಿ ನೀಡುವಂತೆ ಕೊಠಡಿಗಳು ಹಾಗೂ ಶಾಲಾ ಆವರಣ ನಿರ್ವಿುಸಿರುವ ರಾಮೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಶಿಕ್ಷಕರು ಹಾಗೂ ಸಮುದಾಯ ಮನಸು ಮಾಡಿದರೆ, ಒಟ್ಟುಗೂಡಿ ಕಾರ್ಯ ಮಾಡಿದರೆ ಸರ್ಕಾರಿ ಶಾಲೆ ಹೇಗೆ ಅಭಿವೃದ್ಧಿ ಹೊಂದಬಲ್ಲವು ಎಂಬುದಕ್ಕೆ ರಾಮೇನಹಳ್ಳಿ ಶಾಲೆ ಉದಾಹರಣೆಯಾಗಿದೆ ಎಂದರು.

ಶಾಲೆಯ ಮುಖ್ಯಶಿಕ್ಷಕ ಡಾ. ನಿಂಗು ಸೊಲಗಿ ಸಮುದಾಯ ಸಹಕಾರ ಕುರಿತು ಮಾಹಿತಿ ನೀಡಿದರು. ಬಿಇಒ ಎಚ್.ಎಂ. ಫಡ್ನೇಸಿ, ಕ್ಷೇತ್ರ ಸಮನ್ವಯಾಧಿಕಾರಿ, ಗಂಗಾಧರ ಅಣ್ಣಿಗೇರಿ, ಡಯಟ್ ಉಪನ್ಯಾಸಕ ಎಚ್.ಬಿ. ರಡ್ಡೇರ, ಕುರಿಯವರ, ಎಸ್​ಡಿಎಂಸಿ ಅಧ್ಯಕ್ಷ ಮಹೇಶ ಬಾಗಳಿ, ಶಿಕ್ಷಕ ಪಿ.ಎಂ. ಲಾಂಡೆ, ಎಂ.ಆರ್. ಗುಗ್ಗರಿ, ಪಿ.ಆರ್. ಗಾಡದ, ಬಿ.ಎಚ್. ಹಲವಾಗಲಿ, ಶಿವಲೀಲಾ ಅಬ್ಬಿಗೇರಿ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net