ನಿಸರ್ಗ ಅರಣ್ಯ ಉದ್ಯಾನ ಪಾಲಿಕೆಗೆ ಹಸ್ತಾಂತರ, ರೋಟರಿ ಕ್ಲಬ್ ಮಾದರಿ ಕಾರ್ಯಕ್ಕೆ ಮೆಚ್ಚುಗೆ

IMG-20230909-WA0005.jpg
Published on

ಹುಬ್ಬಳ್ಳಿ: ರೋಟರಿ ಕ್ಲಬ್ ಆ್ ಹುಬ್ಬಳ್ಳಿ ವತಿಯಿಂದ ಮಾಡುತ್ತ ಬಂದಿರುವ ಸಾಮಾಜಿಕ ಸೇವಾ ಕಾರ್ಯಗಳು ಜನರ ಮನದಲ್ಲಿ ಉಳಿದಿವೆ. ಇದೇ ರೀತಿ ಇದೀಗ ಪರಿಸರ ಕಾಳಜಿಯೊಂದಿಗೆ ಅಭಿವೃದ್ಧಿ ಪಡಿಸಿರುವ ಉದ್ಯಾನವು ಹಸಿರು ಪ್ರಿಯರ ಗಮನ ಸೆಳೆಯುತ್ತಿದೆ.

ಇಲ್ಲಿಯ ತೋಳನಕೆರೆ ಹತ್ತಿರ ಅಕ್ಷಯ ಕಾಲನಿಯಲ್ಲಿ ಕ್ಲಬ್ ಆಶ್ರಯದಲ್ಲಿ ನಿಮಿರ್ಸಲಾಗಿರುವ ನಿಸರ್ಗ ನಗರ ಅರಣ್ಯ ಮತ್ತು ಉದ್ಯಾನವು ನಗರ ಜೀವನಕ್ಕೆ ಅಗತ್ಯವಾದ ಹಸಿರು ವಾತಾವರಣ ಕಲ್ಪಿಸುತ್ತಿದೆ. ಇಲ್ಲಿ ಮಿಯಾವಾಕಿ ಫಾರೆಸ್ಟ್, ಇಂಡಿಯನ್ ನೇಟಿವ್ ಟ್ರೀ ಪಾರ್ಕ್, ಸುಶ್ರೂತಾ ವನ- ಹರ್ಬಲ್ ಗಾರ್ಡನ್, ಲೈಸರ್ ಪಾರ್ಕ್ ಇವುಗಳನ್ನು ಒಳಗೊಂಡ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ 55 ಸಾವಿರ ಗಿಡಗಳನ್ನು ಬೆಳೆಸಲಾಗಿದೆ.

ಇಂತಹ ಹಲವು ವಿಶೇಷಗಳನ್ನು ಒಳಗೊಂಡ ಸುಂದರ ನಿಸರ್ಗ ನಗರ ಅರಣ್ಯ ಮತ್ತು ಉದ್ಯಾನವನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಶನಿವಾರ ಹಸ್ತಾಂತರಿಸಲಾಯಿತು.

ಮೇಯರ್ ವೀಣಾ ಬರದ್ವಾಡ ಹಾಗೂ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರು ರೋಟರಿ ಕ್ಲಬ್ ಅಧ್ಯಕ್ಷ ಅರವಿಂದ ಕುಬಸದ, ಸಮುದಾಯ ಸೇವೆ ನಿರ್ದೇಶಕ ಸುರೇಂದ್ರ ಪೋರವಾಲ್ ಹಾಗೂ ಕಾರ್ಯಕ್ರಮ ಚೇರ್ಮನ್ ಬಿ.ಬಿ. ಪಾಟೀಲ್ ಅವರಿಂದ ಹಸ್ತಾಂತರ ಪತ್ರ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಈಶ್ವರ ಉಳ್ಳಾಗಡ್ಡಿ ಅವರು, ರೋಟರಿ ಕ್ಲಬ್ ಅಭಿವೃದ್ಧಿ ಪಡಿಸಿದ ಉದ್ಯಾನವು ಇತರರಿಗೆ ಮಾದರಿಯಾಗಿದೆ. ಮಹಾನಗರದ ಇತರ ಉದ್ಯಾನಗಳನ್ನು ಈ ರೀತಿ ಅಭಿವೃದ್ಧಿಪಡಿಸಲು ಗಮನ ಹರಿಸಲಾಗುವುದು ಎಂದರು.

ಪಾಲಿಕೆಯಿಂದ ಎಸ್ಟಿಪಿ ಪ್ಲಾಂಟ್ನಲ್ಲಿ ಉತ್ತಮ ಪರಿಸರ ಅಭಿವೃದ್ಧಿ ಪಡಿಸಲಾಗುತ್ತಿದೆ. ಅದೇ ರೀತಿ ಉದ್ಯಾನಗಳನ್ನು ಮಿಯಾವಾಕಿ ಅರಣ್ಯ ರೀತಿ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಮೇಯರ್ ವೀಣಾ ಬರದ್ವಾಡ ಮಾತನಾಡಿ, ರೋಟರಿ ಕ್ಲಬ್ನವರು ಉದ್ಯಾನದಲ್ಲಿ 5,500ಕ್ಕೂ ಹೆಚ್ಚು ಬಗೆಯ ಗಿಡಗಳನ್ನು ಬೆಳೆದು, ನಿರ್ವಹಣೆ ಮಾಡುವ ಮೂಲಕ ಅತ್ಯುತ್ತಮ ಪರಿಸರ ಕಾಳಜಿ ಮೆರೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಲಿಕೆ ಮಾಜಿ ಸದಸ್ಯ ಮಹೇಶ ಬುಲಿರ್, ಕ್ಲಬ್ ಸದಸ್ಯರಾದ ಡಿ.ಟಿ. ಪಾಟೀಲ, ಮಹದೇವ ಕರಮರಿ, ಅಬ್ದುಲ್ ಸಾದಿಕ್, ಜಿತೇಶ ಪಾಂಚಾಳ, ಮಹೇಂದ್ರ ಠಕ್ಕರ, ಬಾಪುಗೌಡ ಬಿರಾದಾರ ಇತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಚೇರ್ಮನ್ ಬಿ.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಅರವಿಂದ ಕುಬಸದ ಸ್ವಾಗತಿಸಿದರು. ಸಹನಾ ಪೈಕೋಟಿ ಕಾರ್ಯಕ್ರಮ ನಿರೂಪಿಸಿದರು. ಸುರೇಂದ್ರ ಪೋರವಾಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net