

ಕುಶಾಲನಗರ:
ಇಲ್ಲಿನ ಕರಿಯಪ್ಪ ಬಡಾವಣೆಯಲ್ಲಿ ಕರಿಯಪ್ಪ ಬಡಾವಣೆ ನಿವಾಸಿಗಳ ಸೇವಾ ಟ್ರಸ್ಟ್ ವತಿಯಿಂದ ಆಚರಿಸಲಾಗುತ್ತಿರುವ ೨೬ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಗಮನ ಸೆಳೆಯುತ್ತಿದೆ. ಬಡಾವಣೆ ನಿವಾಸಿಗಳಿಗೋಸ್ಕರ ಪ್ರತಿ ದಿನವೂ ಏರ್ಪಡಿಸಲಾಗುತ್ತಿರುವ ವೈವಿಧ್ಯಮಯ ಚಟುವಟಿಕೆಗಳು ನಗರದಲ್ಲಿ ಸದ್ದು ಮಾಡುತ್ತಿದೆ. ಹೆಚ್ಚು ಸದ್ದುಗದ್ದಲವಿಲ್ಲದೆ ಮಾದರಿಯಾಗಿ ಆಚರಿಸಲಾಗುತ್ತಿರುವ ಗಣೇಶೋತ್ಸವದಲ್ಲಿ ಬಡಾವಣೆಯ ಎಲ್ಲಾ ನಿವಾಸಿಗಳು ಒಗ್ಗಟ್ಟಿನಿಂದ ಪಾಲ್ಗೊಂಡು ಉತ್ಸವದ ಕಳೆ ಹೆಚ್ಚಲು ಕೊಡುಗೆ ನೀಡುತ್ತಿದ್ದಾರೆ.
ಗಣೇಶ ಚತುರ್ಥಿಯಂದು ಸೋಮವಾರ (ಆ.೧೮) ಇಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಮಂಗಳವಾರ ಬಡಾವಣೆಯ ಮಕ್ಕಳು ಮತ್ತು ಹಿರಿಯರಿಗೆ ಗೀತೆ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. ಬುಧವಾರ ನೃತ್ಯ ಸ್ಪರ್ಧೆ ಒಳಗೊಂಡಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗುರುವಾರ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಶುಕ್ರವಾರ ಕರಾಟೆ ಕಸರತ್ತು ಪ್ರದರ್ಶನ ನಡೆಯಿತು. ಶನಿವಾರ ತಾಯಿ ಮತ್ತು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮ, ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಭಾನುವಾರ (ಸೆ.೨೪) ಕಾವೇರಿ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಇದೇ ಸಂದರ್ಭದಲ್ಲಿ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಕೆ. ಹನುಮರಾಜು ತಿಳಿಸಿದ್ದಾರೆ.