ಸಾವಯವದಲ್ಲಿ ಖುಷಿ ಕಂಡ ರೈತ: ಚೌಡೇನಹಳ್ಳಿ ಪಿ.ಪಾಲಾಕ್ಷ ಮಾದರಿ ಬದುಕು

Model Farmer
Published on

ಕೆ.ವಿ.ಬಲರಾಮು ಕಿಕ್ಕೇರಿ
‘ಮನಸ್ಸಿದ್ದರೆ ಮಾರ್ಗ’ ಎಂಬ ನಾಣ್ಣುಡಿಯಂತೆ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸಿ ವರ್ಷಕ್ಕೆ ಐದು ಲಕ್ಷ ರೂ. ಆದಾಯ ಗಳಿಸುವ ಮೂಲಕ ಕೆ.ಆರ್.ಪೇಟೆ ತಾಲೂಕು ಚೌಡೇನಹಳ್ಳಿ ಗ್ರಾಮದ ಪಿ.ಪಾಲಾಕ್ಷ ಮಾದರಿ ರೈತರಾಗಿದ್ದಾರೆ.
ಮೂಲತಃ ವಿದ್ಯುತ್ ಗುತ್ತಿಗೆದಾರರಾಗಿರುವ ಇವರು ತಮ್ಮಲ್ಲಿರುವ ಏಳು ಎಕರೆ ಭೂಮಿಯಲ್ಲಿ ಫಲವತ್ತಾದ ಹಣ್ಣುಗಳು, ತೆಂಗು, ಹೂಗಳನ್ನು ಬೆಳೆದಿದ್ದಾರೆ. ರಾಸಾಯನಿಕ ಗೊಬ್ಬರಕ್ಕೆ ಮುಕ್ತಿ ನೀಡಿ ತೆಂಗಿನ ಗರಿಗಳು, ಒಣಗಿ ಬೀಳುವ ಎಲೆಗಳು, ಕಸ ಬಳಸಿಕೊಂಡು ಸಾವಯುವ ಗೊಬ್ಬರ ತಯಾರಿಸಿಕೊಳ್ಳುತ್ತಿದಾರೆ. ಇದೇ ಗೊಬ್ಬರ ಬಳಸಿಕೊಂಡು ನಾನಾ ರೀತಿ ಬೆಳೆ ಬೆಳೆದು ಅಧಿಕ ಇಳುವರಿ ತೆಗೆಯುವ ಮೂಲಕ ಇತರ ರೈತರಿಗೆ ಮಾರ್ಗದರ್ಶಿಯಾಗಿದ್ದಾರೆ.
ಗೊಬ್ಬರ ತಯಾರಿಸುವುದು ಹೇಗೆ?: ತೆಂಗಿನ ತೋಟದಲ್ಲಿ ಬೀಳುವ ತೆಂಗಿನ ಗರಿಗಳು, ತೆಂಗಿನ ಕಾಯಿ ಸುಲಿದ ಸಿಪ್ಪೆಗಳು, ತರಗೆಲೆ ಜತೆಗೆ ದೇಸಿ ತಳಿಯ ರಾಸುಗಳ ಸಗಣಿ ಮತ್ತು ಕುರಿ ಹಿಕ್ಕೆಯನ್ನು ಸಂಗ್ರಹಿಸುತ್ತಾರೆ. ಅಲ್ಲದೇ, ಜಮೀನಿನಲ್ಲೇ ಉತ್ಪತ್ತಿಯಾಗುವ ತ್ಯಾಜ್ಯವನ್ನು ಒಂದುಗೂಡಿಸಿ ಮಿಶ್ರಣ ಮಾಡುತ್ತಾರೆ. ಒಂದು ತಿಂಗಳ ನಂತರ ಎರೆಹುಳುವಿನ ಸಹಾಯದಿಂದ ಜೈವಿಕ ಗೊಬ್ಬರವಾಗಿ ಮಾರ್ಪಡುತ್ತದೆ. ಇದೇ ಗೊಬ್ಬರವನ್ನು ತಮ್ಮ ಜಮೀನಿನಲ್ಲಿ ಬೆಳೆಯುವ ಬೆಳೆಗಳಿಗೆ ಬಳಸಿ ಗುಣಮಟ್ಟದೊಂದಿಗೆ ಅತ್ಯಧಿಕ ಇಳುವರಿ ತೆಗೆಯುತ್ತಾರೆ.

ಯಾವ್ಯಾವ ಬೆಳೆಗಳಿವೆ?: ಏಳು ಎಕರೆ ಜಮೀನಿನಲ್ಲಿ ಗಜನಿಂಬೆ, ನಾಡಿ ನಿಂಬೆ, ದಾಳಿಂಬೆ, ಬೆಣ್ಣೆಹಣ್ಣು, ಕಿತ್ತಲೆ, ಮೂಸಂಬಿ, ಏಲಕ್ಕಿ, ಪಚ್ಚಬಾಳೆ, ಸಪೋಟ, ಸೇಬು, ಏಲಕ್ಕಿ ಬಾಳೆ, ರಸಬಾಳೆ, ಪುಟ್ಟಬಾಳೆ ಬೆಳೆದಿದ್ದಾರೆ. ವಿವಿಧ ಜಾತಿಯ ಹೂವಿನ ಗಿಡಗಳು, ನುಗ್ಗೆ ಗಿಡಗಳು, 300ಕ್ಕೂ ಹೆಚ್ಚು ತೆಂಗಿನ ಮರಗಳು, 1500 ಅಡಕೆ ಗಿಡಗಳನ್ನು ಬೆಳೆದಿದ್ದಾರೆ. ಸಿರಿಧಾನ್ಯಗಳ ಪೈಕಿ ರಾಗಿ ಬೆಳೆಗೂ ಆದ್ಯತೆ ನೀಡಿದ್ದಾರೆ. ಇಷ್ಟೇ ಅಲ್ಲದೇ, ಪಾಲಾಕ್ಷ ತಮ್ಮ ಜಮೀನಿನಲ್ಲೇ ಬಿಡುವ ಗುಣಮಟ್ಟದ ತೆಂಗಿನ ಕಾಯಿ ಹಾಗೂ ಅಡಕೆ ಬೀಜಗಳನ್ನು ಆಯ್ದುಕೊಂಡು ಸಸಿ ಮಾಡುವ ಮೂಲಕ ಸುತ್ತಮುತ್ತಲಿನ ರೈತರಿಗೆ ಮಾರಾಟ ಮಾಡುತ್ತಾರೆ.
ಅಂತರ್ಜಲ ಹೆಚ್ಚಳಕ್ಕೆ ಇಂಗುಗುಂಡಿ: ಬೇಸಿಗೆಯಲ್ಲಿ ಮಳೆ ಕೊರತೆಯಾದಾಗ ಬೆಳೆಗಳಿಗೆ ನೀರುಣಿಸಲು ಕೊಳವೆ ಬಾವಿ ಕೊರೆಸಿದ್ದಾರೆ. ಇವುಗಳ ಅಂತರ್ಜಲ ಮಟ್ಟ ವೃದ್ಧಿಗಾಗಿ ಕೊಳವೆ ಬಾವಿ ಪಕ್ಕದಲ್ಲೇ ಇಂಗುಗುಂಡಿಗಳನ್ನು ನಿರ್ಮಾಣ ಮಾಡಿದ್ದಾರೆ. ವರ್ಷವಿಡೀ ಹನಿ ನೀರಾವರಿ ಮೂಲಕ ಬೆಳೆಗಳಿಗೆ ನೀರುಣಿಸುತ್ತಾರೆ. ಕೃಷಿ ಕೆಲಸಕ್ಕೆ ಮಕ್ಕಳ ಸಹಕಾರ: ಇವರೊಂದಿಗೆ ಬಿಇ ಪದವಿ ಪೂರ್ಣಗೊಳಿಸಿರುವ ಮೋಹನ್‌ಕುಮಾರ್ ಮತ್ತು ಕಿರಣ್ ಹಾಗೂ ಪತ್ನಿ ಹೊನ್ನಮ್ಮ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ‘ಕಾರ್ಮಿಕರ ಕೊರತೆ ಇರುವ ಕಾರಣ ನನ್ನ ಮಕ್ಕಳೇ ಕೃಷಿ ಕೆಲಸದ ನೆರವಿಗೆ ಬರುತ್ತಾರೆ’ ಎಂದು ಪಾಲಾಕ್ಷ ಹೇಳುತ್ತಾರೆ.
ಉಪ ಕಸಬು: ಬೆಳೆಗಳ ಜತೆ ಉಪ ಕಸುಬಾಗಿ ಕುರಿ ಸಾಕಣೆ ಮಾಡುತ್ತಾರೆ. ಅಲ್ಲದೇ, ಭೂಮಿ ಉಳುಮೆಗೆ ಎತ್ತುಗಳು ಮತ್ತು ಹಸುಗಳನ್ನು ಸಾಕಿದ್ದಾರೆ. ಈ ಮೂಲಕ ಜೀವನ ನಿರ್ವಹಣೆಗೆ ಉಪ ಆದಾಯವನ್ನು ಕಂಡುಕೊಂಡಿದ್ದಾರೆ.

ರೈತರಾದವರು ಯಾವುದೇ ಪ್ರಶಸ್ತಿಗೆ ಜೋತು ಬೀಳದೆ ಕೃಷಿಯನ್ನೇ ಕಾಯಕವಾಗಿಸಿಕೊಂಡರೆ ಶ್ರೇಷ್ಠ ಪ್ರಶಸ್ತಿಗಳು ನಮ್ಮನ್ನೇ ಅರಸಿ ಬರುತ್ತವೆ. ಸರ್ಕಾರಗಳು ಯಾವುದೇ ಉಚಿತ ಗ್ಯಾರಂಟಿಗಳನ್ನು ನೀಡದೆ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ಹಾಗೂ ಬಿತ್ತನೆ ಬೀಜ, ಗೊಬ್ಬರ ಹಾಗೂ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇಷ್ಟಾದರೆ ರೈತರು ಸ್ವಂತ ದುಡಿಮೆಯಿಂದ ಅಭಿವೃದ್ಧಿ ಹೊಂದುತ್ತಾರೆ ಎನ್ನುವುದು ಪಿ.ಪಾಲಾಕ್ಷ ಅವರ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net