ಚನ್ನರಾಯಪಟ್ಟಣದಲ್ಲಿ 16 ರಿಂದ ಮೋದಕ ಮಹಾಯಾಗ

13 CRP-1A.
Published on

ಚನ್ನರಾಯಪಟ್ಟಣ: ಪಟ್ಟಣದ ಶ್ರೀ ಆದಿಚುಂಚನಗಿರಿ ಸಮೂಹ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ಶ್ರೀ ಆದಿ ವಿದ್ಯಾಗಣಪತಿ ದೇವಸ್ಥಾನದಲ್ಲಿ ಸೆ.16 ಮತ್ತು 17ರಂದು ಮೋದಕ ಮಹಾಯಾಗ ಮತ್ತು ಗುರು ತೋರಿದ ದಾರಿ ತಿಂಗಳ ಮಾಮನ ತೇರು 120ನೇ ಹುಣ್ಣಿಮೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಾಸನ ಮತ್ತು ಕೊಡಗು ಶಾಖಾ ಮಠದ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.


ಲೋಕ ಕಲ್ಯಾಣಾರ್ಥವಾಗಿ ಶ್ರೀ ಆದಿ ವಿದ್ಯಾಗಣಪತಿ ದೇವಸ್ಥಾನವನ್ನು ನವೀಕರಣಗೊಳಿಸಿ ಉದ್ಘಾಟನೆ ನೆರವೇರಿಸಿದ ಮೊದಲ ವರ್ಷದ ಹಾಗೂ ಯುಗಯೋಗಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಸುವರ್ಣ ಪಟ್ಟಾಭಿಷೇಕದ ಸವಿನೆನಪಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಸೆ.16ರ ಗೋಧೂಳಿ ಲಗ್ನದಲ್ಲಿ ದೇವತಾ ಪ್ರಾರ್ಥನೆ, ಗೋಪೂಜೆ, ಯಾಗ ಮಂಟಪ ಪ್ರದೇಶ, ದೀಪೋದ್ಘಾಟನೆ, ಗಣಪತಿ ಪೂಜಾ, ಪುಣ್ಯಾಹ, ಆಚಾರ್ಯವರಣಮ್, ಕಂಕಣಧಾರಣೆ, ಮಹಾಸಂಕಲ್ಪ, ಗಣೇಶ ಅಥರ್ವಶೀರ್ಷಮಂತ್ರ ಪಾರಾಯಣಮ್, 108 ಕಲಶ ಸಹಿತ ಪ್ರಧಾನ ಕಲಶ ಪ್ರತಿಷ್ಠಾಪನೆ, ಷೋಡಶೋಪಚಾರ ಪೂಜಾ ಅಷ್ಟಾವಧಾನ ಸೇವಾ ನೆರವೇರಲಿದೆ ಎಂದರು.


ಸೆ.17ರ ಪ್ರಾತಃಕಾಲದಲ್ಲಿ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಮೋದಕ ಮಹಾಯಾಗ ಪ್ರಾರಂಭ, ಶ್ರೀ ಆದಿ ವಿದ್ಯಾಗಣಪತಿ ಮೂರ್ತಿಗೆ ಪಂಚಾಮೃತ ಅಭಿಷೇಕ ಹಾಗೂ ಬೆಳಗ್ಗೆ 10.20ಕ್ಕೆ ಸಲ್ಲುವ ಲಗ್ನದಲ್ಲಿ ಪೂರ್ಣಾಹುತಿ, ಮಹಾಮಂಗಳಾರತಿ, ಅನುಗ್ರಹ ಸಂದೇಶ, ಕಲಶ ವಿಸರ್ಜನೆ, ಕಲಶದಾನ ನಂತರ ಪ್ರಸಾದ ವಿತರಣೆ ಇರುತ್ತದೆ. ಸಂಜೆ 6.30ಕ್ಕೆ ‘ಗುರುತೋರಿದ ದಾರಿ ತಿಂಗಳ ಮಾಮನ ತೇರು -120ನೇ ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ.
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಯತಿವರೇಣ್ಯರು ಸಾನಿಧ್ಯ ವಹಿಸುವರು. ಕಾರ್ಯಕ್ರಮದಲ್ಲಿ ಚನ್ನರಾಯಪಟ್ಟಣ ಪೌರಕಾರ್ಮಿಕರನ್ನು ಸನ್ಮಾನಿಸಲಾಗುವುದು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net