

ವಿಜಯವಾಣಿ ಸುದ್ದಿಜಾಲ ಧಾರವಾಡ
ಭಾರತ ಹಾಗೂ ಪಾಕಿಸ್ತಾನ ನಡುವಿನ ಯದ್ಧದ ಹಿನ್ನೆಲೆಯಲ್ಲಿ ನಗರದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿನ ಹಿಂದುಸ್ಥಾನ ಪೆಟ್ರೋಲಿಯಂ ಕಾರ್ಪೊರೇಶನ್ ಲಿ. (ಎಚ್ಪಿಸಿಎಲ್)ನ ಎಲ್ಪಿಜಿ ಘಟಕದಲ್ಲಿ "ಆಪರೇಷನ್ ಅಭ್ಯಾಸ' ಹೆಸರಿನಲ್ಲಿ ಶುಕ್ರವಾರ ಅಣಕು ಪ್ರದರ್ಶನ ನಡೆಸಲಾಯಿತು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದ ಮೇರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾಡಳಿತ, ಎಚ್ಪಿಸಿಎಲ್, ಎಲ್ಪಿಜಿ ಕಂಪನಿ ಸಹಯೋಗದಲ್ಲಿ ಅಣುಕು ಪ್ರದರ್ಶನ ನಡೆಸಿ, ಶತ್ರು ರಾಷ್ಟ್ರಗಳಿಂದ ದಾಳಿಯಾದಾಗ ಯಾವ ರೀತಿ ರಕ್ಷಣಾತ್ಮಕ ಕಾರ್ಯ ಕೈಗೊಳ್ಳಬೇಕು ಎಂಬುದನ್ನು ಪ್ರಾತ್ಯಕೆ ಮೂಲಕ ಸಿಬ್ಬಂದಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಎಲ್ಪಿಜಿ ಘಟಕದಲ್ಲಿ ಅನಿಲ ಸೋರಿಕೆಯ ಕಾಲ್ಪನಿಕ ಸನ್ನಿವೇಶ ಸೃಷ್ಟಿ ಆಗುತ್ತಿದ್ದಂತೆ ಸೈರನ್ ಕೂಗಲಾರಂಭಿಸಿತು. ಅಧಿಕಾರಿಗಳು ಅಗ್ನಿಶಾಮಕ ದಳ, ಪೊಲೀಸರಿಗೆ ಮಾಹಿತಿ ನೀಡಿ ಸುರಕ್ಷಿತ ಸ್ಥಳಕ್ಕೆ ಸಿಬ್ಬಂದಿಗಳನ್ನು ಸ್ಥಳಾಂತರಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ರಣಾ ಕಾರ್ಯಾಚರಣೆ ನಡೆಸಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಕ್ರಿಯೆ ನಡೆಸಿದರು.
ಇದಾದ ಬಳಿಕ ಗ್ಯಾಸ್ ತುಂಬಿದ ಟ್ಯಾಂಕರ್ಗೆ ರಸ್ತೆಯಲ್ಲಿ ಅಪಘಾತ ಸಂಭವಿಸಿದಾಗ ಏನೆಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಂಡು ಯಾವುದೇ ಅವಘಡ ತಡೆಯುವ ಬಗೆಯನ್ನು ಸಹ ಅಣಕು ಪ್ರದರ್ಶನದ ಮೂಲಕ ತಿಳಿಸಿದರು.
ನಂತರ ಜಿಲ್ಲಾಧಿಕಾ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಪ್ರಮುಖ ಸ್ಥಳಗಳನ್ನು ಭದ್ರತೆ ದೃಷ್ಟಿಯಿಂದ ಗುರುತಿಸಲಾಗಿದೆ. ಬಾಹ್ಯ ದಾಳಿ ಹಾಗೂ ಮಾನವ ನಿರ್ಮಿತ ವಿಪತ್ತುಗಳಿಂದ ಜಿಲ್ಲೆಯ ರಕ್ಷಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದರು.
ದೇಶದಲ್ಲಿ ತುರ್ತು ಪರಿಸ್ಥಿತಿ ಬಂದಾಗ ಜನರಿಗೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಅಣುಕು ಪ್ರದರ್ಶನ ನಡೆಸಲಾಗಿದೆ. ಅದರಲ್ಲಿ ಅನಿಲ ಸ್ಫೋಟವಾದಾಗ ಸಿಬ್ಬಂದಿ ಕಾರ್ಯಾಚರಣೆ ಮತ್ತು ಅನಿಲ ಸೋರಿಕೆಯಾದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಕೈಗೊಳ್ಳುವ ಕ್ರಮವನ್ನು ಅಣಕು ಪ್ರದರ್ಶನದ ಮೂಲಕ ತೋರಿಸಲಾಗಿದೆ ಎಂದರು.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ್ ಬ್ಯಾಕೋಡ ಮಾತನಾಡಿ, ಅವಘಡ ಸಂಭವಿಸಿದಾಗ ಸೈರನ್ ಜತೆಗೆ ಮುನ್ನೆಚ್ಚರಿಕೆ ಸಂದೇಶ ನೀಡುವ ವ್ಯವಸ್ಥೆ ಕಲ್ಪಿಸಿದರೆ ಇನ್ನೂ ಉತ್ತಮವಾಗಲಿದೆ. ಆ ಸ್ಥಳದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬುದರ ಮಾಹಿತಿ ಸುತ್ತಲಿನ ಜನರಿಗೆ ಸಿಗಲಿದೆ ಎಂದರು.
ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಡಿಎಸ್ಪಿ ನಾರಾಯಣ ಭರಮನಿ, ರವಿಂದ್ರ ರಾಠೋಡ, ವೆಂಕಟೇಶ ರಾಠೋಡ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಪಶು ವೈದ್ಯಕಿಯ ಇಲಾಖೆ ಉಪನಿರ್ದೇಶಕ ರವಿ ಸಾಲಿಗೌಡರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ತಹಸೀಲ್ದಾರ ಡಾ.ಡಿ.ಎಚ್.ಹೂಗಾರ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.