

ಮೈಸೂರು: ದೆಹಲಿ ಚಲೋ ವೇಳೆ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಸಿಡಿಸಿ ಓರ್ವ ರೈತನ ಸಾವಿಗೆ ಕಾರಣರಾದ ಪೊಲೀಸರು, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಅಣಕು ಶವಯಾತ್ರೆ ನಡೆಸಲಾಯಿತು.
ನಗರದ ಗನ್‌ಹೌಸ್ ವೃತ್ತದಲ್ಲಿ ಜಮಾಯಿಸಿದ ರೈತರು ಸಂಸ್ಕೃತ ಪಾಠಶಾಲೆ ವೃತ್ತದವರೆಗೂ ಸಾಗಿ, ಮತ್ತೆ ವಾಪಸ್ ಗನ್‌ಹೌಸ್‌ವತ್ತದವರೆಗೆ ಅಣಕು ಶವಯಾತ್ರೆ ನಡೆಸಿದರು.
ಈ ವೇಳೆ ಶವದ ಪ್ರತಿಕೃತಿಯನ್ನು ಕಸಿದುಕೊಳ್ಳಲು ಪೊಲೀಸರು ಮುಂದಾದರು. ಇದರಿಂದ ರೈತರು, ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಆದರೂ ಪೊಲೀಸರು ಶವದ ಪ್ರತಿಕೃತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಕುರುಬೂರ್ ಶಾಂತಕುಮಾರ್, ದೆಹಲಿಯಲ್ಲಿ ರೈತರು ಭಿಕ್ಷೆ ಬೇಡುತ್ತಿಲ್ಲ. ಸರ್ಕಾರವೇ ನಿಗದಿ ಮಾಡುವ ಬೆಂಬಲ ಬೆಲೆ ಖಾತರಿ ಕಾನೂನು ಕೇಳುತ್ತಿದ್ದೇವೆ. ದೇಶದ ರೈತರನ್ನು ಕತ್ತಲಲ್ಲಿಟ್ಟಿದ್ದಾರೆ. ಸರ್ಕಾರವೇ ನಿಗದಿ ಮಾಡುವ ಬೆಲೆಗೆ ಶಾಸನಬದ್ಧ ಖಾತರಿ ನೀಡಬೇಕು ಎಂದು ಹೋರಾಟ ಮಾಡಿದರೆ ರೈತರ ಮೇಲೆ ಅಶ್ರುವಾಯು ಸಿಡಿಸಿ ರೈತರನ್ನು ಕೊಲೆ ಮಾಡುತ್ತಿದ್ದಾರೆ. ರೈತ ಹೋರಾಟಗಾರರನ್ನು ಭಯೋತ್ಪಾದಕರು, ದೇಶದ್ರೋಹಿಗಳು, ಖಲಿಸ್ತಾನಿಗಳು ಎಂದು ಹೇಳಿ ಅವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಕಿಡಿ ಕಾರಿದರು.