

ಮಂಡ್ಯ: ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಣಕು ಶವಯಾತ್ರೆಯೊಂದಿಗೆ ಪ್ರತಿಭಟನೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶವಯಾತ್ರೆ ನಡೆಸಿದ ಕಾರ್ಯಕರ್ತರು ಧರಣಿ ನಿರತರಾಗಿದ್ದ ವೇಳೆ ಪ್ರತಿಕೃತಿಯನ್ನು ಪೊಲೀಸರು ಪ್ರತಿಭಟನಾಕಾರರ ಕಣ್ತಪ್ಪಿಸಿ ಹೊತ್ತೊಯ್ದ ಹಳೇ ತಾಲೂಕು ಕಚೇರಿ ಆವರಣದಲ್ಲಿ ಬಚ್ಚಿಟ್ಟರು. ಮಾಹಿತಿ ತಿಳಿಯುತ್ತಿದ್ದಂತೆ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಜತೆ ಕಾರ್ಯಕರ್ತರು ಹೋದರು. ಅತ್ತ ಪೊಲೀಸರು ಕೂಡ ಹಳೇ ತಾಲೂಕು ಕಚೇರಿಗೆ ತೆರಳಿದರು. ಪ್ರತಿಕೃತಿ ಪ್ರತಿಭಟನಾಕಾರರ ಕೈಗೆ ಸಿಕ್ಕಿದವು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಈ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರದಲ್ಲಿ ಪ್ರತಿಕೃತಿ ದಹಿಸಲು ಮುಂದಾದಾಗ ಪೊಲೀಸರು ತಡೆದು ಗೇಟಿನ ಹೊರಕ್ಕೆ ಕಳುಹಿಸಿದರು. ಮತ್ತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಗೇಟಿನ ಬಳಿ ದಹನಕ್ಕೆ ಮುಂದಾದರು. ಮತ್ತೆ ತಡೆಯಲು ಮುಂದಾದ ಪೊಲೀಸರನ್ನು ಭೇದಿಸಿ ಬೆಂಕಿ ಹಚ್ಚಿದರು. ಈ ಸಮಯದಲ್ಲಿ ದೊಡ್ಡಮಟ್ಟದ ಜಟಾಪಟಿಯೇ ನಡೆದುಹೋಯಿತು. ಡಿವೈಎಸ್‌ಪಿ ಶಿವಮೂರ್ತಿ ಮತ್ತು ಪೊಲೀಸ್ ಅಧಿಕಾರಿಗಳು ಬೆಂಕಿ ನಂದಿಸಲು ಸಾಕಷ್ಟು ಹರಸಾಹಸಪಟ್ಟರು. ಆದರೆ ಪ್ರತಿಭಟನಾಕಾರರು ಸುತ್ತುವರೆದ ಹಿನ್ನೆಲೆಯಲ್ಲಿ ನಂದಿಸಲು ಸಾಧ್ಯವಾಗಲಿಲ್ಲ. ಬಳಿಕ ಜಿಲ್ಲಾಧಿಕಾರಿ ಕಚೇರಿ ಪ್ರವೇಶ ದ್ವಾರಕ್ಕೆ ತೆರಳಿ ಪೊಲೀಸರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಪ್ರತಿಭಟನೆಯಲ್ಲಿ ಅನಿಲ್‌ಕುಮಾರ್, ಕೆ.ಎಂ.ಶ್ರೀನಿವಾಸ್, ನಾಗರಾಜ್, ಕುಮಾರ್, ಶಿವರಾಜ್, ಸುರೇಶ್‌ಕುಮಾರ್, ಸೋಮಶೇಖರ್ ಇತರರಿದ್ದರು.