ಬದಿಯಡ್ಕ: ಕೆಎಸ್ಟಿಎ ಕುಂಬಳೆ ಉಪಜಿಲ್ಲಾ ಉಪಸಮಿತಿಯ ನೇತೃತ್ವದಲ್ಲಿ ಫೆ.22ರಂದು ನಡೆಯಲಿರುವ ಎಲ್ಎಸ್ಎಸ್/ಯುಎಸ್ಎಸ್ ಮಾದರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಂಘಟನಾ ಸಮಿತಿಯ ಸಭೆ ಬೇಳ ಸೈಂಟ್ ಭಾರ್ತಲೋಮಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆಯಿತು.
ಬಿ.ವಿಷ್ಣುಪಾಲ್ ಉದ್ಘಾಟಿಸಿದರು. ಪದಾಧಿಕಾರಿಗಳಾದ ಅಧ್ಯಕ್ಷೆ ಎಲಿಜಬೆತ್ ವೈ, ಅಧ್ಯಕ್ಷ ರಾಜನ್ ಎ, ಸಂಚಾಲಕ ವಿನೋದ್ ಕ್ರಾಸ್ತಾ, ಸಹ ಸಂಚಾಲಕ ಬಿನ್ನಿ ಐರಾಟ್ಟಿಲ್ ಉಪಸ್ಥಿತರಿದ್ದರು. ಈ ಸಂದರ್ಭ ಪರೀಕ್ಷೆಯ ಸಂಘಟನಾ ಸಮಿತಿ ರಚಿಸಲಾಯಿತು. ಮಾದರಿ ಪರೀಕ್ಷೆಗಳು ಜಿ.ವಿ.ಎಚ್.ಎಸ್.ಕಾರಡ್ಕ, ಜಿ.ಎಚ್.ಎಸ್.ಎಸ್.ಪೆರಡಾಲ, ಸಂತ ಬಾರ್ತಲೋಮಿಯ ಹಿರಿಯ ಪ್ರಾಥಮಿಕ ಶಾಲೆ ಬೇಳ ಎಂಬ ಮೂರು ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆಗಳ ಉಪಜಿಲ್ಲಾಮಟ್ಟದ ಉದ್ಘಾಟನೆಯನ್ನು ಬೆಳಗ್ಗೆ 9.30ಕ್ಕೆ ಬೇಳ ಶಾಲೆಯಲ್ಲಿ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ ವಿ. ನಿರ್ವಹಿಸುವರು. ಉಪ ಜಿಲ್ಲೆಯಲ್ಲಿ 1200 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.