

ಕಾರವಾರ: ಮೇ 12 ರಂದು ಸಾಯಂಕಾಲ ಕಾರವಾರದಲ್ಲಿ ಯುದ್ಧದ ಸೈರನ್ ಮೊಳಗಲಿದೆ. ಹೌದು, ಭಾರತ-ಪಾಕಿಸ್ತಾನ ಯುದ್ಧ ಪರಿಸ್ಥಿತಿ ವಿಪರೀತಕ್ಕೆ ಹೋದರೆ ನಾಗರಿಕರನ್ನು ಸುರಕ್ಷಿತವಾಗಿ ಇಡುವ ಸಂಬಂಧ ದೇಶದ ವಿವಿಧೆಡೆ ಕಲ್ಪಿತ ಕಾರ್ಯಾಚರಣೆ ಆಯೋಜಿಸಲಾಗುತ್ತಿದ್ದು, ಅದರಲ್ಲಿ ಕಾರವಾರವೂ ಸೇರಿದೆ.!! ಬುಧವಾರ ವಿವಿಧ ಸಂಬಂಧಪಟ್ಟ ಇಲಾಖೆ ಅಽಕಾರಿಗಳ ಸಭೆ ನಡೆಸಿದ ನಂತರ ಜಿಲ್ಲಾಽಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ಕಲ್ಪಿತ ಕಾರ್ಯಾಚರಣೆಯ ಮಾಹಿತಿ ನೀಡಿದರು. ಈಗಾಗಲೇ ಬೆಂಗಳೂರಿನಲ್ಲಿ `ಅಭ್ಯಾಸ್' ಹೆಸರಿನ ಕಲ್ಪಿತ ಕಾರ್ಯಾಚರಣೆ ನಡೆಸಲಾಗಿದೆ. ಕಾರವಾರದಲ್ಲಿ ಕದಂಬ ನೌಕಾನೆಲೆ ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರ ಇರುವ ಕಾರಣ ಕಾರವಾರವನ್ನು ಸೂಕ್ಷ್ಮ ಪ್ರದೇಶ ಸೆಕ್ಟರ್-2 ಎಂದು ಪರಿಗಣಿಸಿ, ಭಾರತ ಸರ್ಕಾರ ಗೃಹ ಸಚಿವಾಲಯ ಪಟ್ಟಿ ಮಾಡಿದೆ. ಕಾರವಾರ ಶಹರ, ಕದಂಬ ನೌಕಾನೆಲೆ ಸುತ್ತಲಿನ ಗ್ರಾಮಗಳು, ಕೈಗಾ ಅಣು ಸ್ಥಾವರ ಹಾಗೂ ಸುತ್ತಲಿನ ಗ್ರಾಮಗಳು ಕಾರವಾರ ಶಹರದಲ್ಲಿ ವಿವಿಧ ಸ್ವರೂಪದ ಕಲ್ಪಿತ ಕಾರ್ಯಾಚರಣೆಯನ್ನು ಮೇ 12 ರ ಮಧ್ಯಾಹ್ನ 4 ಗಂಟೆಯಿಂದ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದರು.
ವೈಮಾನಿಕ ದಾಳಿಗಳು ಬೆಳಕನ್ನು ಆಧರಿಸಿ ನಡೆಯುತ್ತವೆ ಇದರಿಂದ ಬ್ಲ್ಯಾಕ್ ಔಟ್ ತರಬೇತಿಯನ್ನು ನಡೆಸಬೇಕಿದೆ. ಮೇ 12 ರಂದು ರಾತ್ರಿ 7.15 ರ ಸುಮಾರಿಗೆ ಕಾರವಾರ ನಗರ ಹಾಗೂ ಮಲ್ಲಾಪುರದ ಕೈಗಾ ಟೌನ್ ಶಿಪ್‌ನಲ್ಲಿ 13 ಕಡೆಗಳಲ್ಲಿ ಯುದ್ಧದ ಸೈರನ್ ಮೊಳಗಲಿದೆ. ತಕ್ಷಣ ಹೊರಗಡೆ ಇದ್ದವರು ಮನೆಯೊಳಗೆ ಸೇರಿಕೊಳ್ಳಬೇಕು. ಮನೆಯ ಬೆಳಕುಗಳನ್ನು ಬಂದ್ ಮಾಡಬೇಕು.ವಾಹನದಲ್ಲಿ ಓಡಾಡುತ್ತಿರುವವರು ತಮ್ಮ ವಾಹನದ ಲೈಟ್ ಬಂದ್ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕು. 8 ಗಂಟೆಯವರೆಗೆ ಈ ಕಾರ್ಯಾಚರಣೆ ನಡೆಯಲಿದೆ ಎಂದರು.
ಅಗ್ನಿ ಅವಗಢ, ಮಿಸೈಲ್ ದಾಳಿಯಿಂದ ಕಟ್ಟಡ ಧ್ವಂಸ, ಕಡಲ ತೀರದಲ್ಲಿ ಶೇಲ್ ದಾಳಿ, ಪ್ರವಾಹ ಪರಿಸ್ಥಿತಿ ಹೀಗೆ ವಿವಿಧ ಸಂದರ್ಭಗಳನ್ನು ಕಲ್ಪಿಸಿಕೊಂಡು ರಕ್ಷಣಾ ಕಾರ್ಯಾಚರಣೆ ಆಯೋಜಿಸಲಾಗುತ್ತಿದೆ. ಗೃಹ ರಕ್ಷಕ, ಎನ್‌ಸಿಸಿ, ಎನ್‌ವೈಕೆ, ಎನ್‌ಎಸ್‌ಎಸ್ ಮುಂತಾದ ಸಿವಿಲ್ ಡಿಫೆನ್ಸ್ ಕಾರ್ಯಕರ್ತರನ್ನು ಜನರ ರಕ್ಷಣೆಗೆ ಅಣಿ ಮಾಡಲು ಈ ಕಲ್ಪಿತ ಕಾಯಾಚರಣೆಯನ್ನು ಆಯೋಜಿಸಲಾಗುತ್ತಿದೆ. ಸಿವಿಲ್ ಡಿಫೆನ್ಸ್ ವ್ಯವಸ್ಥೆಯ ಸಾಮರ್ಥ್ಯವನ್ನು ಪರಿಶೀಲಿಸುವುದು. ಭಾರತೀಯ ನೌಕಾ ಸೇನೆ, ಕೋಸ್ಟ್ ಗಾರ್ಡ್, ಎನ್‌ಡಿಆರ್‌ಎಫ್, ಪೊಲೀಸ್, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಮೀನುಗಾರಿಕೆ ಇಲಾಖೆ ಹೀಗೆ ವಿವಿಧ ಭದ್ರತಾ ಪಡೆಗಳು, ಇಲಾಖೆಗಳ ಜತೆಗೆ ಸಿವಿಲ್ ಡಿಫೆನ್ಸ್ ವ್ಯವಸ್ಥೆಯ ಸಂವಹನ ವ್ಯವಸ್ಥಿತಗೊಳಿಸುವುದು ಈ ಅಣಕು ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ಒಟ್ಟಾರೆ ಸುಮಾರು 1 ಸಾವಿರ ಜನ ಇದರಲ್ಲಿ ಪಾಲ್ಗೊಳ್ಳುವರು ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದರು.
ಏರ್ ವಾರ್ನಿಂಗ್ ಸೈರನ್ ಮೊಳಗಿಸುವುದು, ರೇಡಿಯೋ ಸಂಪರ್ಕ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವುದು, ಯುದ್ಧ ನಡೆದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಬಗ್ಗೆ ನಾಗರಿಕರು, ನಾಗರಿಕ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡುವುದು. ಹೆಲಿಕಾಫ್ಟರ್ ಅಥವಾ ಯುದ್ಧ ವಿಮಾನಗಳ ಅವಗಢ ಸಂಭವಿಸಿದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವುದು. ಯುದ್ಧ ಸಂಭವಿಸಿದಲ್ಲಿ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು ಮುಂತಾದ ಅಂಶಗಳನ್ನು ಇಟ್ಟುಕೊಂಡು ಈ ಕಾರ್ಯಾಚರಣೆ ನಡೆಯಲಿದೆ ಎಂದು ಗೃಹ ಸಚಿವಾಲಯ ಪಟ್ಟಿ ಬಿಡುಗಡೆ ಮಾಡಿದೆ.
ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಕೈಗಾ, ನೌಕಾನೆಲೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಕಲ್ಪಿತ ಕಾರ್ಯಾಚರಣೆ ನಡೆಸಲಾಗುತ್ತಿದೆ.ಯುದ್ಧದ ಪರಿಸ್ಥಿತಿ ನಿರ್ಮಾಣವಾದರೆ ಸಿವಿಲ್ ಡಿಫೆನ್ಸ್ ವ್ಯವಸ್ಥೆಯನ್ನು ಸನ್ನದ್ಧ ಮಾಡಲು ಬೇಕಾದ ಅಭ್ಯಾಸ ಇದಾಗಿದೆ. ಜನ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ. ಇಲಾಖೆಗಳ ಜತೆ ಸಹಕಾರ ನೀಡಬೇಕು. ಕಲ್ಪಿತ ಕಾರ್ಯಾಚರಣೆಯ ಜತೆಗೆ ನಿಜವಾಗಿಯೂ ತೊಂದರೆಯ ಪರಿಸ್ಥಿತಿ ಉಂಟಾದರೂ ನಿಭಾಯಿಸಲು ಬೇಕಾದ ಸಿದ್ಧತೆಗಳನ್ನು ನಾವು ಮಾಡುತ್ತಿದ್ದೇವೆ.
ಕೆ.ಲಕ್ಷ್ಮೀಪ್ರಿಯಾ ಜಿಲ್ಲಾಧಿಕಾರಿ, ಉತ್ತರ ಕನ್ನಡ