ನ್ಯಾಯಾಂಗದಲ್ಲಿ ವೃತ್ತಿ ಜೀವನ ಉಪನ್ಯಾಸ,  7ರಂದು ಕಲ್ಪಿತ ನ್ಯಾಯಾಲಯ ಸ್ಪರ್ಧೆ ಬಹುಮಾನ ವಿತರಣೆ

Published on

ಹುಬ್ಬಳ್ಳಿ: ಕೆಎಲ್ಇ ಲಾ ಅಕಾಡೆಮಿ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರ ಮಟ್ಟದ ಕಲ್ಪಿತ ನ್ಯಾಯಾಲಯ ಅಂತಿಮ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಮತ್ತು ವಿಶೇಷ ಉಪನ್ಯಾಸ- ಸಂವಾದ ಕಾರ್ಯಕ್ರಮ ಡಿ. 7ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಕೆಎಲ್ಇ ಕಾನೂನು ಮಹಾವಿದ್ಯಾಲಯ ಪ್ರಾಚಾರ್ಯ ಪ್ರೊ. ಜೆ.ಎಂ. ಮಲ್ಲಿಕಾರ್ಜುನಯ್ಯ ತಿಳಿಸಿದರು.

ನಗರದ ಜಿ.ಕೆ. ಕಾನೂನು ಮಹಾವಿದ್ಯಾಲಯದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗನ ಕಾನೂನು ಮಹಾವಿದ್ಯಾಲಯದಲ್ಲಿ ನಡೆದಿರುವ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಾನೂನು ಕಾಲೇಜು ಹಾಗೂ ಮುಂಬೈ, ಪುಣೆ, ಚನ್ನೆ ಸೇರಿ ದೇಶದ ವಿವಿಧ ಕಾನೂನು ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಅಲ್ಲದೇ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ ಎಂದರು.

ಡಿ. 7ರಂದು ಬೆಳಗ್ಗೆ 11ಕ್ಕೆ ಬಿವಿಬಿ ಆವರಣದ ದೇಶಪಾಂಡೆ ಸಭಾಭವನದಲ್ಲಿ ನ್ಯಾಯಾಂಗದಲ್ಲಿ ವೃತ್ತಿ ಜೀವನ ಕುರಿತು ಉಪನ್ಯಾಸ ನಡೆಯಲಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶ ಅಭಯ ಎಸ್. ಓಕ್ ಉಪನ್ಯಾಸ ನೀಡುವರು. ಭಾರತದ ನ್ಯಾಯಾಂಗ ವ್ಯವಸ್ಥೆ ಹಾಗೂ ನ್ಯಾಯಾಂಗ ಇಲಾಖೆಯಲ್ಲಿ ಪ್ರಸ್ತುತ ಇರುವ ಉದ್ಯೋಗಾವಕಾಶ, ಸೌಲಭ್ಯ ಕುರಿತು ನ್ಯಾಯಮೂರ್ತಿಗಳು ಮಾಹಿತಿ ನೀಡುವರು. ವಿದ್ಯಾರ್ಥಿಗಳ ಜತೆ ಸಂವಾದ ನಡೆಸುವರು ಎಂದರು.

ಮಧ್ಯಾಹ್ನ 3ಕ್ಕೆ ಕಲ್ಪಿತ ನ್ಯಾಯಾಲಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಸುಪ್ರೀಂ ಕೋರ್ಟ್ ನ್ಯಾ. ಅಭಯ ಓಕ್, ಹೈಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಜಿ. ಉಮಾ, ನ್ಯಾ. ಶ್ರೀಶಾನಂದ, ನ್ಯಾ. ಉಮೇಶ ಅಡಿಗ, ನ್ಯಾ. ವಿಜಯಕುಮಾರ ಪಾಟೀಲ ಹಾಗೂ ಇತರರು ಪಾಲ್ಗೊಳ್ಳುವರು ಎಂದರು.

ಕೆಎಲ್ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಜಿ.ಕೆ. ಕಾನೂನು ಕಾಲೇಜಿನ ಪ್ರಾಚಾರ್ಯ ಜ್ಞಾನೇಶ್ವರ ಚೌರಿ, ಪ್ರೊ. ಎಸ್.ಎಂ. ಹುಲ್ಲೂರ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net