

ಹಾನಗಲ್ಲ: ರಂಗಭೂಮಿ ಯಾರಿಗೂ ಕಾಯುವುದಿಲ್ಲ, ಎಂದೂ ನಿಲ್ಲುವುದಿಲ್ಲ, ಚಲನಶೀಲತೆಯೇ ಅದರ ಗುಟ್ಟು, ಸಮಾಜ ಪರಿವರ್ತನೆಯೇ ಅದರ ಶಕ್ತಿ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ತಾಲೂಕಿನ ರಂಗಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ರಂಗಶಂಕರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಜಾನನ ಯುವಕ ಮಂಡಳ ಸಹಯೋಗದಲ್ಲಿ 4 ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾಟಕವು ಯಾವಾಗಲೂ ಸಮಾಜಮುಖಿಯಾಗಿ ಹೇಳುವುದು, ಕೇಳುವುದನ್ನು ಕಲಿಸುತ್ತದೆ. ವ್ಯಕ್ತಿತ್ವ ರೂಪಿಸುವ ಶಕ್ತಿ ನಾಟಕಕ್ಕಿದೆ. ರಂಗಭೂಮಿ ಒಂದು ಐತಿಹಾಸಿಕ ಪರಂಪರೆಯನ್ನು ಒಳಗೊಂಡು ಸತ್ಯಾಸತ್ಯತೆಯ ವಿಮರ್ಶೆ ವಾಸ್ತವ ನೋಟವನ್ನು ನೀಡಬಲ್ಲ ಶಕ್ತಿ ಇದೆ. ಎಲ್ಲ ಕಾಲಕ್ಕೂ ಸಲ್ಲುವ ನಾಟಕಗಳು ಯಾರಿಗಾಗಿಯೂ ಕಾಯದೆ, ಎಲ್ಲಿಯೂ ನಿಲ್ಲದೆ ಚಲನಶೀಲವಾಗಿವೆ ಎಂದರು.
ಸಾಹಿತಿ ಮಾರುತಿ ಶಿಡ್ಲಾಪೂರ ಮಾತನಾಡಿ, ಶೇಷಗಿರಿ ನಾಲ್ಕೈದು ದಶಕಗಳ ರಂಗ ಅಭಿನಯದ ಮೂಲಕ ರಂಗಗ್ರಾಮವಾಗಿದೆ. ಇಲ್ಲಿನ ಪ್ರೇಕ್ಷಕರಿಗೆ ಎಂತಹ ಕಠಿಣ ನಾಟಕವನ್ನೂ ಆಸ್ವಾದಿಸುವ, ರಸಗ್ರಹಣ ಮಾಡುವ ಶಕ್ತಿ ಸಹಜವಾಗಿಯೇ ಕರಗತವಾಗಿದೆ. ನೂರಾರು ನಾಟಕಗಳನ್ನು ರಂಗದಲ್ಲಿ ನೋಡಿ ಸಾವಿರಾರು ಚಿಂತನೆಗಳನ್ನು ಅನುಭವಿಸಿದ ಹಿರಿಮೆ ಶೇಷಗಿರಿ ಗ್ರಾಮಕ್ಕಿದೆ ಎಂದರು.
ಗ್ರಾಪಂ ಅಧ್ಯಕ್ಷ ಪರಶುರಾಮ ಅಂಬಿಗೇರ ಅಧ್ಯಕ್ಷತೆ ವಹಿಸಿದ್ದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಭು ಗುರಪ್ಪನವರ ಹಾಗೂ ಸಿದ್ದಪ್ಪ ರೊಟ್ಟಿ, ಶಿವಲಿಂಗಪ್ಪ ತಲ್ಲೂರ, ಬಿ.ವಿ. ಬಿರಾದಾರ, ಬಸವರಾಜ ಬಡೆಮ್ಮಿ, ನಿಜಗುಣಿ ರೊಟ್ಟಿ, ಚಂದ್ರಶೇಖರ ಮಾಳಗಿ, ಎಸ್.ಆರ್. ಹಿರೇಮಠ, ಗೂಳಪ್ಪ ಅರಳೀಕಟ್ಟಿ ಅತಿಥಿಗಳಾಗಿದ್ದರು. ಕಲಾವಿದ ಸಿದ್ದು ಕೊಂಡೋಜಿ ಕಾರ್ಯಕ್ರಮ ನಿರೂಪಿಸಿದರು.
ಸಂವಾದ:
ಮೊದಲ ದಿನ ಶ್ರೀನಿವಾಸಮೂರ್ತಿ ಅವರ ನಿರ್ದೇಶನದ ಬಹುಮುಖಿ ನಾಟಕ ಪ್ರದರ್ಶನದ ನಂತರ ಜರುಗಿದ ಸಂವಾದದಲ್ಲಿ ಮಾತನಾಡಿದ ಉಪನ್ಯಾಸಕರಾದ ಡಾ.ಮಹದೇವಿ ಕಣವಿ, ಶಮಂತಕುಮಾರ, ಸುನಿತಾ ಉಪ್ಪಿನ, ಗೂಳಪ್ಪ ಅರಳಿಕಟ್ಟಿ, ಸಾಮಾಜಿಕ ಸಾಮರಸ್ಯದ ಜೀವಂತಿಕೆಯ ಸಂಗತಿಗಳನ್ನು ಒಳಗೊಂಡ ಬಹುಮುಖ ನಾಟಕ ಉತ್ತಮವಾಗಿ ಮೂಡಿಬಂತು. ಒಬ್ಬನೇ ಏನೆಲ್ಲ ಆಗಬಲ್ಲ ಎಂಬ ಸಂಗತಿ, ಗಾಳಿ ಸುದ್ದಿಗಳ ಪರಿಣಾಮಗಳು, ಮೋಸ ಜಗತ್ತನ್ನಾಳುವ ಸತ್ಯಕಥೆ, ಅಮಾಯಕರು ಬಲಿಯಾಗುವುದು, ಪತ್ರಿಕೆ ಸಂಪಾದಕ ಹಾಗೂ ವರದಿಗಾರನ ಸಂಕಟ ಸತ್ಯಕಥೆಯ ಮನೋಜ್ಞ ಅಭಿನಯದ ಮೂಲಕ ಪ್ರದರ್ಶನಗೊಂಡಿತು ಎಂದರು.