

ಮಂಗಳೂರು: ನವಮಂಗಳೂರು ಬಂದರಿನ ಕಂಟೈನರ್ ಸ್ಕ್ಯಾನರ್ ಯಾರ್ಡ್‌ನಲ್ಲಿ ಕಸ್ಟಮ್ಸ್ ಇಲಾಖೆಯಿಂದ ನೂತನವಾಗಿ ಅಳವಡಿಸಲಾಗಿರುವ ಮೊಬೈಲ್-ಎಕ್ಸ್‌ರೇ ಕಂಟೈನರ್ ಸ್ಕ್ಯಾನರ್ (ಎಂಎಕ್ಸ್‌ಸಿಎಸ್)ನ್ನು ಶುಕ್ರವಾರ ನವದೆಹಲಿಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ಚೇರ‌್ಮನ್ ವಿವೇಕ್ ಜೋಹರಿ ವರ್ಚುವಲ್ ವೇದಿಕೆಯಲ್ಲಿ ಉದ್ಘಾಟಿಸಿದರು.
ಕಾರ್ಗೋ ಆಮದು-ರಫ್ತು ಸಂದರ್ಭ ಎಲ್ಲ ರೀತಿಯ ವ್ಯವಸ್ಥೆಗಳನ್ನು ಸರಳ-ಸುಲಭವಾಗಿಸುಲ್ಲಿ ಕಸ್ಟಮ್ಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಆ ಮೂಲಕ ಸುಗಮ ವ್ಯವಹಾರಕ್ಕೆ ನೆರವಾಗುತ್ತಿದೆ. ಕಂಟೈನರ್‌ಗಳನ್ನು ತಪಾಸಣೆ ಮಾಡುವ ಪ್ರಕ್ರಿಯೆ ಸರಳಗೊಳಿಸುವ ಮೂಲಕ ಬಂದರಿನಲ್ಲಿ ಕಾರ್ಗೋ ನಿರ್ವಹಣೆ ಹೆಚ್ಚಿಸಲು ನೂತನ ಕಂಟೈನರ್ ಸ್ಕ್ಯಾನರ್ ಸಹಕಾರಿಯಾಗಲಿದೆ ಎಂದರು.
ಎನ್‌ಎಂಪಿಟಿ ಚೇರ್ಮನ್ ಡಾ. ವೆಂಕಟರಮಣ ಅಕ್ಕರಾಜು, ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ ಸದಸ್ಯರಾದ ಡಿ.ಪಿ. ನಾಗೇಂದ್ರ ಕುಮಾರ್, ಸಂಗೀತಾ ಶರ್ಮಾ, ರಾಜೀವ ತಲ್ವಾರ್, ಕಸ್ಟಮ್ಸ್ ಬೆಂಗಳೂರು ಜೋನ್ ಪ್ರಧಾನ ಆಯುಕ್ತ ಮಾಂಡಲಿಕ ಶ್ರೀನಿವಾಸ್, ಮಂಗಳೂರು ಕಸ್ಟಮ್ಸ್ ಆಯುಕ್ತ ಇಮಾಮುದ್ದೀನ್ ಅಹ್ಮದ್ ಉಪಸ್ಥಿತರಿದ್ದರು.
ನೂತನ ಸ್ಕ್ಯಾನರ್ ಗಂಟೆಗೆ 14 ಕಂಟೈನರ್‌ಗಳನ್ನು ಸ್ಕಾೃನ್ ಮಾಡುವ ಸಾಮರ್ಥ್ಯ ಹೊಂದಿದ್ದು, ವರ್ಷದಲ್ಲಿ 1.6 ಲಕ್ಷ ಕಂಟೈನರ್‌ಗಳನ್ನು ಸ್ಕ್ಯಾನ್ ಮಾಡಲಿದೆ. ಒಳಗಡೆ ಇರುವ ವಸ್ತುಗಳಿಗೆ ಯಾವುದೇ ಹಾನಿಯಾಗದಂತೆ ಇದು ಕಾರ್ಯನಿರ್ವಹಿಸುತ್ತದೆ. ಇದರಿಂದಾಗಿ ಟ್ರಕ್‌ಗಳು ಬಂದರು ಒಳಗಿನಿಂದ ಬೇಗ ಹೊರಬಂದು ಗಮ್ಯಸ್ಥಾನ ತಲುಪಲು ಸಹಕಾರಿಯಾಗುತ್ತದೆ.