ಬದುಕಿನ ಸಮಯ ಕಸಿಯುತ್ತಿರುವ ಮೊಬೈಲ್: ಮಂಜುಳಾ ಮಾನಸ ಬೇಸರ

44
Published on

ಮೈಸೂರು: ಇತ್ತೀಚಿನ ದಿನಗಳಲ್ಲಿ ಎಲ್ಲ ವರ್ಗದ ಜನರಲ್ಲಿ ಸಾಮಾಜಿಕ ಜಾಲತಾಣದ ವ್ಯಾಮೋಹ ಹೆಚ್ಚುತ್ತಿದ್ದು, ಇವರೆಲ್ಲರ ಬದುಕಿನ ಅಮೂಲ್ಯ ಸಮಯ ಅದರಲ್ಲಿ ಕಳೆದು ಹೋಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಬೇಸರಿಸಿದರು.
ಅದಮ್ಯ ರಂಗಶಾಲೆ ವತಿಯಿಂದ ನಗರದ ಜಯಲಕ್ಷ್ಮಿಪುರಂನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಟಿ.ಪಿ.ಕೈಲಾಸಂ ರಚನೆಯ ‘ಗಂಡಸ್ಕತ್ರಿ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೊಬೈಲ್ ಮಾಯೆಯಂತೆ ನಮ್ಮ ಬದುಕನ್ನು ಆವರಿಸಿದೆ. ಇದರಿಂದಾಗಿ ಜನರು ಸಾಹಿತ್ಯ, ಸಂಸ್ಕೃತಿ, ನಾಟಕ, ಸಂಗೀತ, ನೃತ್ಯ, ಕ್ರೀಡಾ ಕ್ಷೇತ್ರಗಳಿಂದ ದೂರ ಸರಿಯುತ್ತಿದ್ದಾರೆ. ಪರಸ್ಪರ ಮಾತುಕತೆ ಇಲ್ಲದೆ ಸಂಬಂಧಗಳು ನಶಿಸುತ್ತಿವೆ ಎಂದರು.
ನಾಟಕ ಬದುಕಿನ ಒಂದು ಭಾಗ. ಜನಜೀವನ ಪ್ರತಿಫಲಿಸುವ ನಾಟಕಗಳು ಸಾಮಾಜಿಕ ಅಂಕುಡೊಂಕುಗಳನ್ನು ತಿದ್ದುತ್ತವೆ. ಹಾಸ್ಯ, ವ್ಯಂಗ್ಯ, ಕುಚೋದ್ಯದ ಮೂಲಕ ನಾಟಕಗಳು ವ್ಯವಸ್ಥೆಯ ಲೋಪ ಸರಿಪಡಿಸುತ್ತವೆ. ಜನರು ಸಾಹಿತ್ಯ ಮತ್ತು ನಾಟಕಾಭಿರುಚಿ ಬೆಳೆಸಿಕೊಂಡು ಒತ್ತಡದಿಂದ ಹೊರಬರಲು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ನಾಟಕ ಸಹಕಾರಿ ಎಂದು ಹೇಳಿದರು.
ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಡಿ.ರವಿಕುಮಾರ್ ಮಾತನಾಡಿ, ಮಕ್ಕಳು ಮತ್ತು ವಿದ್ಯಾರ್ಥಿಗಳು ಕೇವಲ ಅಧಿಕ ಅಂಕಗಳ ಪಡೆದರೆ ಸಾಲದು. ಪ್ರತಿಭಾವಂತರಾಗಿ ರೂಪುಗೊಳ್ಳಬೇಕು. ಓದಿನ ಜತೆಗೆ ನಾಟಕಾಭಿನಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಲೆಗೆ ಬೆಲೆ ಸಿಗಬೇಕಾದರೆ ಅದಕ್ಕೆ ಪ್ರೋತ್ಸಾಹ ತುಂಬ ಅಗತ್ಯ. ನಾಟಕ ಪ್ರದರ್ಶನ ನಡೆದಾಗ ಅದನ್ನು ವೀಕ್ಷಿಸುವ ಮೂಲಕ ರಂಗಕರ್ಮಿಗಳ ಬೆನ್ನಿಗೆ ನಿಲ್ಲಬೇಕು. ಅದಮ್ಯ ರಂಗಶಾಲೆ ಮಕ್ಕಳಲ್ಲಿ ನಾಟಕ ಕಲೆ ಬೆಳೆಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಟಿ.ಸತೀಶ್ ಜವರೇಗೌಡ, ಸಾಹಿತಿ ಟಿ.ಲೋಕೇಶ್ ಹುಣಸೂರು, ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಕಾರ್ಯದರ್ಶಿ ಡಾ.ಬಿ.ಬಸವರಾಜು, ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ ಇದ್ದರು.
ರಂಗ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಳಿಕ ವಿನೋದ್ ಸಿ.ಮೈಸೂರು ನಿರ್ದೇಶನದ ಗಂಡಸ್ಕತ್ರಿ ನಾಟಕ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net