

ಅಂಕೋಲಾ: ಆಧುನಿಕ ಯುಗದ ಅನ್ವೇಷಣೆಗಳಿಂದ ಮೊಬೈಲ್ ಬಳಕೆಗೆ ಬಂದು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿರಳವಾಗುತ್ತಿವೆ. ವಿದ್ಯಾರ್ಥಿಗಳು ಮೊಬೈಲ್ ಅನ್ನು ಅವಶ್ಯಕತೆಗಷ್ಟೇ ಬಳಕೆ ಮಾಡಬೇಕು ಎಂದು ಕಾರವಾರದ ಮರೈನ್ ಬಯಾಲಜಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವಿ.ಎನ್. ನಾಯಕ ಹೇಳಿದರು.
ಇಲ್ಲಿಯ ಜಿ.ಸಿ. ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಪ್ರತಿಭೆಯನ್ನು ಶಿಕ್ಷಕರು ಮತ್ತು ಪಾಲಕರು ಗುರುತಿಸಿದಾಗ ಮಾತ್ರ ಕಲೆಯ ಜೀವಂತಿಕೆಯನ್ನು ಉಳಿಸಬಹುದು ಎಂದರು.
ನಿವೃತ್ತ ಪ್ರಾಚಾರ್ಯ ಮೋಹನ ಹಬ್ಬು ಮಾತನಾಡಿ, ಸಾಂಸ್ಕೃತಿಕ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಮನಸು ಉಲ್ಲಸಿತವಾಗುತ್ತದೆ. ನೆನಪಿನ ಶಕ್ತಿ ಹೆಚ್ಚುತ್ತದೆ ಎಂದರು.
ಕೆನರಾ ವೆಲ್ಫೇರ್ ಟ್ರಸ್ಟ್‌ನ ಧರ್ಮದರ್ಶಿ ಡಾ.ಕೃಷ್ಣ ಪ್ರಭು ಮಾತನಾಡಿದರು. ಜಿ.ಸಿ. ಕಾಲೇಜ್ ಪ್ರಾಚಾರ್ಯ ಡಾ.ಎಸ್.ವಿ. ವಸ್ತ್ರದ ಅಧ್ಯಕ್ಷತೆ ವಹಿಸಿದ್ದರು. ಧರ್ಮದರ್ಶಿ ಕೃಷ್ಣಾನಂದ ಶೆಟ್ಟಿ ಉಪಸ್ಥಿತರಿದ್ದರು.
ವಿ.ಎನ್. ನಾಯಕ, ಡಾ. ಕೃಷ್ಣ ಪ್ರಭು, ಕೃಷ್ಣಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ್ಯೆ ಸುಜಾತಾ ಲಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಶಿಲ್ಪಾ ಹೊನ್ನೆಕೋಟೆ, ಉಪನ್ಯಾಸಕ ಉಲ್ಲಾಸ ಹುದ್ದಾರ, ಶ್ರುತಿ ನಾಯ್ಕ ನಿರ್ವಹಿಸಿದರು. ಸೌಮ್ಯಾ ಕಾಮತ, ಮೋಹನ ದುರ್ಗೇಕರ್ ಸಹಕರಿಸಿದರು.