

ತೇರದಾಳ: ಸ್ಪರ್ಧಾತ್ಮಕ ಯುಗದಲ್ಲಿ ಮೊಬೈಲ್ ಬಳಕೆ ಅನಿವಾರ್ಯವಾಗಿದ್ದು, ಅದನ್ನು ಮಿತವಾಗಿ ಬಳಸಬೇಕು ಎಂದು ಸಿಬಿಎಸ್‌ಇ ಪ್ರಾಚಾರ್ಯ ವೈ.ಎಚ್. ಅಲಾಸ ಹೇಳಿದರು.
ಸಮೀಪದ ಹಳಿಂಗಳಿ ಗ್ರಾಮದಲ್ಲಿ 17ನೇ ವರ್ಷದ ಶ್ರೀ ಅಲ್ಲಮಪ್ರಭು ಜಾತ್ರೆಯಲ್ಲಿ ಪ್ರಭುವಿನ ಮಹಾಪ್ರಭೋತ್ಸವದಲ್ಲಿ ಶ್ರೀಗುರು ಅಲ್ಲಮಪ್ರಭು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರದ ಯಾವುದೇ ಅನುದಾನ ಪಡೆಯದೇ ತಮ್ಮ ಸಂಸ್ಥೆಯಿಂದಲೇ ಉಚಿತವಾಗಿ ಬಡಮಕ್ಕಳಿಗೆ ಬಟ್ಟೆ, ನಿರಂತರ ಮಧ್ಯಾಹ್ನದ ಊಟ ಕೊಡುತ್ತಿರುವುದು ಹೆಮ್ಮೆಯ ವಿಷಯ. ಮನೆಯೇ ಮೊದಲು ಪಾಠ ಶಾಲೆ, ಜನನಿ ತಾನೇ ಮೊದಲು ಗುರು ಎಂದ ಹಾಗೆ ತಾಯಿ ಶಿಕ್ಷಕಿಯಾಗದೆ ಗುರುವಾಗಬೇಕು. ಮಗುವಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿದಾಗ ಮಾತ್ರ ಸಮಾಜದಲ್ಲಿ ಒಳ್ಳೆಯ ವ್ಯಕ್ತ ಆಗಬಲ್ಲರು ಎಂದರು.
ಮಹಾವೀರ ಪ್ರಭುಗಳು ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.
ಸಂಪನ್ಮೂಲ ವ್ಯಕ್ತಿ ವಿಜಯಕುಮಾರ ಹಲಕುರ್ಕಿ, ಶೀತಲ ನಂದೆಪ್ಪನವರ ಮತ್ತು ಕರ್ನಾಟಕ ರಾಜ್ಯದ ಕ್ರಾಂತಿವೀರ ಬ್ರಿಗ್ರೆಡ್‌ನ ಅಧ್ಯಕ್ಷ ಬಸವರಾಜ ಬಾಳಿಕಾಯಿ ಮಾತನಾಡಿದರು.
ಗಣ್ಯರನ್ನು ಹಾಗೂ ರಾಜ್ಯಮಟ್ಟದ ಸೈಕ್ಲಿಂಗ್ ಪಟು ಖುಷಿ ಸಿಂಗೆ ಅವರನ್ನು ಸತ್ಕರಿಸಲಾಯಿತು.
ಹನಗಂಡಿ ಶಿವಗೊಂಡೇಶ್ವರ ಆಶ್ರಮದ ಸಿದ್ಧೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಕೆ.ಡಿ. ಮಾಲಗಾವಿ, ಸೋಮಶೇಖರ ಜಿ.ಎಸ್. ಕುಮಾರ ಖೇಬೋಜಿ, ಋಷಿಕೇಶಿ ದೊಡಮನಿ, ಬಿ.ಡಿ. ಹಿರೆಮೇತ್ರಿ, ನ್ಯಾಯವಾದಿ ಮಹೇಶ ಕಾಳೆ, ಅಮರಜೀತ್ ಹನಗಂಡಿ ಇತರರಿದ್ದರು. ವಿದ್ಯಾರ್ಥಿನಿಯರು ಪ್ರಾರ್ಥಸಿದರು. ಪುಷ್ಪಾ ನಿಡೋಣಿ ಸ್ವಾಗತಿಸಿದರು. ಸಾವಿತ್ರಿ ಹನಗಂಡಿ ವರದಿ ವಾಚಿಸಿ, ನಿರೂಪಿಸಿದರು. ಶಿಕ್ಷಕಿ ಶಿಲ್ಪಾ ವಂದಿಸಿದರು.