ಮೊಬೈಲ್, ಟಿವಿ ‘ಕಲಾವಂತಿಕೆಗೆ’ ಕಂಟಕ

CLK PU COLLEGE 25
Published on

ಚಳ್ಳಕೆರೆ: ವಿದ್ಯಾರ್ಥಿಗಳಲ್ಲಿ ನೆಲಮೂಲದ ಕಲೆ, ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಆಸಕ್ತಿ ಇರಬೇಕು ಎಂದು ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮಣ್ ಹೇಳಿದರು.

ನಗರದ ಸೋಮಗುದ್ದು ರಸ್ತೆಯಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಟಿವಿ, ಮೊಬೈಲ್ ಬಳಕೆಗಳಿಂದ ಕಲಾವಂತಿಕೆ ಚಟುವಟಿಕೆಗಳು ಮರೆಯಾಗುತ್ತಿವೆ. ಇದರಿಂದ ಗ್ರಾಮೀಣ ಜನಪದ ಕಲೆ ಸೇರಿ ರಂಗಭೂಮಿಕೆಯ ಸಾಂಸ್ಕೃತಿಕ ಸೊಬಗು ಕಣ್ಮರೆ ಆಗುತ್ತಿದೆ ಎಂದು ವಿಷಾದಿಸಿದರು.

ಸಮಾಜವನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಅನುಸಂಧಾನ ಇರಬೇಕು. ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಬೆಳೆಯಲು ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ರವೀಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಂದ ಮರೆಯಾಗುತ್ತಿವೆ. ಇದರಿಂದ ಪ್ರಗತಿಪರ ಸಮಾಜ ಬೆಳವಣಿಗೆಗೆ ಮಾರಕ ಅನಿಸುತ್ತದೆ ಎಂದು ಎಚ್ಚರಿಸಿದರು.

ತಾಲೂಕು ವ್ಯಾಪ್ತಿಯಲ್ಲಿನ ಇಪ್ಪತೈದು ಕಾಲೇಜುಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಬಹುಪಾಲು ನಿರಾಶಕ್ತಿ ತೊರಿಸಲಾಗಿದೆ. ವಿದ್ಯಾರ್ಥಿಗಳು ಪಠ್ಯಕ್ಕೆ ಮಾತ್ರ ಸಿಮೀತವಾಗಬಾರದು. ನಾಡಿನ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಉಪನ್ಯಾಸಕ ಕೆ.ವಿ.ಚಂದ್ರಶೇಖರ್ ಮಾತನಾಡಿ, ನಾಡಿನ ಕಲೆ, ಸಾಂಸ್ಕೃತಿಕ ಬೆಳವಣಿಗೆಗೆ ಇತಿಹಾಸ ಪರಂಪರೆ ಇದೆ. ವಿಜಯನಗರ ಸಾಮ್ರಾಜ್ಯದಲ್ಲಿ ದಾಸ ಮತ್ತು ವ್ಯಾಸ ಕೂಟಗಳಿಂದ ಕಲೆ, ಲಲಿತ ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಪೋಷಣೆ ಮಾಡಲಾಗಿದೆ ಎಂದು ಹೇಳಿದರು.

ಇಂತಹ ಚಟುವಟಿಕೆಗಳಿಂದ ಮಾನವನ ಅಂತರ್ಗತ ಕಲೆಯನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವಾಗಿದೆ. ರಾಮಾಯಣ, ಮಹಾಭಾರತ ಘಟನೆಗಳನ್ನು ಚಿತ್ರಕಲೆಯಲ್ಲಿ ಸೆರೆ ಹಿಡಿಯುವ ಮೂಲಕ ಕಥಾ ವಸ್ತುಗಳನ್ನು ಸಮಾಜಕ್ಕೆ ಆಕರ್ಷಣೀಯವಾಗಿ ಪರಿಚಯಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.

ಉಪನ್ಯಾಸಕರಾದ ಬೆಳಗಟ್ಟ ನಾಗರಾಜ, ಕೆ.ಎನ್.ವಸಂತಕುಮಾರ್, ವೆಂಕಟೇಶ್‌ಮೂರ್ತಿ, ಶಾಂತಕುಮಾರಿ, ಪುಷ್ಪಲತಾ, ಹಬೀಬುಲ್ಲಾ, ಲಲಿತಮ್ಮ, ಜಬೀವುಲ್ಲಾ ಮತ್ತಿತರರು ಇದ್ದರು.

ಸ್ಪರ್ಧಾ ವಿಜೇತರು: ಪ್ರಬಂಧ: ಬಿ.ಆರ್.ಪ್ರಜ್ವಲ್, ಎಚ್.ದಾದಾಪೀರ್. ಚರ್ಚಾ ಸ್ಪರ್ಧೆ: ಪಿ.ಆರ್.ಮಂಜುಳಾ. ಇಂಗ್ಲೀಷ್ ವಿಭಾಗದ ಚರ್ಚೆ: ಸುಹಾನ್ ಕೌಸರ್, ಎಂ.ಅನರ್ಘ್ಯ. ಭಾವಗೀತೆ: ಯು.ಪಲ್ಲವಿ, ನಾಗರತ್ನಾ. ಜನಪದ ಗೀತೆ: ಆರ್.ಸ್ವರೂಪಾ. ಏಕಪಾತ್ರಾಭಿನಯ: ಟಿ.ಸಿಂಚನಾ. ವಿಜ್ಞಾನ ಉಪನ್ಯಾಸ ವಿಭಾಗ: ಕೆ.ಎಂ. ರಂಗಸ್ವಾಮಿ, ಎಂ.ಜೀವನ್, ಬಿ.ಟಿ.ಸೌಂದರ್ಯ. ಚಿತ್ರಕಲೆ: ಜಿ.ಉದಯಕಿರಣ್, ಎಚ್.ಅಜಯ್. ರಸಪ್ರಶ್ನೆ: ಆರ್.ಸಿದ್ದಲಕ್ಷ್ಮೀ, ಬಿ.ಎಂ.ಸಹನಾ, ಆರ್.ಚಿತ್ತಾರ, ಪಿ.ದಿವ್ಯಾ ವಿಜೇರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net