

ವೇಣುವಿನೋದ್ ಕೆ.ಎಸ್. ಮಂಗಳೂರು
ಮಕ್ಕಳಿಗೆ ಆನ್‌ಲೈನ್ ಕಲಿಕೆಯ ಹೆಸರಲ್ಲಿ ಕಳೆದರಡು ವರುಷಗಳಿಂದ ಸುಲಭವಾಗಿ ಮೊಬೈಲ್ ಫೋನ್ ಲಭಿಸಿರುವುದು ಪೋಕ್ಸೋ ಪ್ರಕರಣ ಹೆಚ್ಚುವುದಕ್ಕೆ ಪರೋಕ್ಷವಾಗಿ ಕಾರಣವಾದಂತಿದೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಇತ್ತೀಚಿನ ಕೆಲತಿಂಗಳುಗಳಲ್ಲಿ ನಡೆದಿರುವ ಪ್ರಕರಣಗಳಲ್ಲಿ ಶೇ.70ರಷ್ಟು ಸ್ಮಾರ್ಟ್ ಫೋನ್ ಮೂಲಕ ಆಗಿರುವಂಥದ್ದು ಎನ್ನುವುದನ್ನು ಮಕ್ಕಳ ಕಲ್ಯಾಣ ಸಮಿತಿ ಗಮನಿಸಿದೆ. ಕೆಲದಿನಗಳ ಹಿಂದೆ ಪೋಕ್ಸೋ ಕಾಯ್ದೆಯಡಿ ಒಟ್ಟು 7 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇದರಲ್ಲಿ 5 ಹೊಸ ಪ್ರಕರಣ ಮತ್ತು 2 ತಡವಾಗಿ ವರದಿಯಾದ ಪ್ರಕರಣಗಳು ಸೇರಿವೆ. ಹೆತ್ತವರಿಗೆ ತಡವಾಗಿ ಗೊತ್ತಾದ ಬಳಿಕ ಪ್ರಕರಣ ದಾಖಲಿಸಲಾಗಿದೆ.
ಸ್ಮಾರ್ಟ್ ಫೋನ್‌ನಲ್ಲಿ ಪರಿಚಯ: ಇಲ್ಲಿ ಸಂತ್ರಸ್ತ ಮಕ್ಕಳಿಗೆ ಅಪರಾಧಿಗಳೊಂದಿಗೆ ಸಂಪರ್ಕ ಪ್ರಾರಂಭವಾಗುವುದೇ ಸ್ಮಾರ್ಟ್ ಫೋನ್ ಮೂಲಕ. ಆನ್‌ಲೈನ್ ಮೂಲಕ ಫೇಸ್‌ಬುಕ್, ವಾಟ್ಸಾೃಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿಕೊಂಡು ಎಳೆ ಮನಸ್ಸಿನ ಮಕ್ಕಳನ್ನು ಮರುಳು ಮಾಡಿ ಬಲಿಪಶುವಾಗಿಸುತ್ತಾರೆ ದುಷ್ಕರ್ಮಿಗಳು ಎನ್ನುತ್ತಾರೆ ಮಕ್ಕಳ ಕಲ್ಯಾಣ ಸಮಿತಿಯ ರೆನ್ನಿ ಡಿಸೋಜ. ಸಂತ್ರಸ್ತ ಮಕ್ಕಳೇ ಕೌನ್ಸೆಲಿಂಗ್ ವೇಳೆ ನೀಡಿರುವ ಮಾಹಿತಿ ಇದು.
ಬಹುತೇಕ ಸಂತ್ರಸ್ತರು 13ರಿಂದ 17ರ ವಯೋಮಾನದವರು. ಹೆಚ್ಚಿನ ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಂತ್ರಸ್ತರನ್ನು ಬಲಿಪಶುವಾಗಿಸಿದ್ದರೆ, ಕೆಲವು ಪ್ರಕರಣಗಳಲ್ಲಿ ಮೊಬೈಲ್ ಟೆಕ್ನೀಶಿಯನ್‌ಗಳೂ ಸೇರಿರುವುದು ಮತ್ತೊಂದು ಬೆಳವಣಿಗೆ.
ಫೋಟೋ, ವಿಡಿಯೋ ದುರ್ಬಳಕೆ: ಆನ್‌ಲೈನ್ ಕ್ಲಾಸ್ ಸಹಿತ ಯಾವುದೋ ಸಂದರ್ಭದಲ್ಲಿ ಹೆತ್ತವರು ತಮ್ಮ ಮೊಬೈಲ್ ಫೋನ್‌ಗಳನ್ನು ಮಕ್ಕಳಿಗೆ ಕೊಟ್ಟಿರುತ್ತಾರೆ. ಆಗ ತೆಗೆದಿರುವಂತಹ ಫೋಟೋ, ವಿಡಿಯೋಗಳು ಮೊಬೈಲ್‌ನಲ್ಲಿ ಸೇವ್ ಆಗಿರುತ್ತದೆ. ಫೋನ್‌ನಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತೆಂದು ರಿಪೇರಿಗೆ ಮೊಬೈಲ್ ಶಾಪ್‌ಗೆ ನೀಡಿದಾಗ, ಅದರಲ್ಲಿರುವ ಪೋಟೋ, ವಿಡಿಯೋಗಳನ್ನು ದುರ್ಬಳಕೆ ಮಾಡುವ ಸಾಧ್ಯತೆಯೂ ಇರುತ್ತದೆ ಎಂದು ರೆನ್ನಿ ಡಿಸೋಜ ವಿವರಣೆ ನೀಡಿದ್ದಾರೆ.
ಒಟ್ಟಾರೆ ಪೋಕ್ಸೋ ಪ್ರಕರಣಗಳಲ್ಲಿ ಶೇ.50ರಷ್ಟು ನಗರ ಪ್ರದೇಶದಿಂದಲೇ ಬರುತ್ತಿದೆ. ಹಿಂದೆ ಪೋಕ್ಸೋ ಪ್ರಕರಣಗಳಲ್ಲಿ ಬಂಧುವರ್ಗ, ಸಮೀಪದವರು ಹಾಗೂ ಮಕ್ಕಳ ಸುತ್ತಲಿನ ಪ್ರದೇಶದವರಿಂದಲೇ ಕೃತ್ಯ ನಡೆಯುತ್ತಿತ್ತು. ಆದರೆ ಈಗ ಇದು ಹೈಟೆಕ್ ಆಗಿದೆ. ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿರುವುದರಿಂದ ಬ್ಲಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗುವುದು, ಲೈಂಗಿಕವಾಗಿ ಬಳಸಿಕೊಳ್ಳುವುದು ಇತ್ಯಾದಿ ಬೆಳಕಿಗೆ ಬರುತ್ತಿದೆ.
ಈ ವರ್ಷ 119 ಕೇಸ್: 2012ರಿಂದ 2020ರ ಡಿಸೆಂಬರ್ ವರೆಗೆ ದ.ಕ. ಜಿಲ್ಲೆಯಲ್ಲಿ ಒಟ್ಟು 731 ಪೋಕ್ಸೋ ಪ್ರಕರಣಗಳು ವರದಿಯಾಗಿವೆ. ಈ ವರ್ಷ ಅಕ್ಟೋಬರ್ ವರೆಗೆ 119 ಪ್ರಕರಣಗಳು ದಾಖಲಾಗಿವೆ.
ಮೊಬೈಲ್ ಫೋನ್‌ಗಳನ್ನು ರಿಪೇರಿಗೆ ನೀಡುವಾಗ ಎನ್‌ಕ್ರಿಪ್ಟ್ ಮಾಡಿಯೇ ಕೊಟ್ಟರೆ ಉತ್ತಮ. ಇಲ್ಲವಾದರೆ ದುಷ್ಕರ್ಮಿಗಳು ಅದರಲ್ಲಿರುವ ಖಾಸಗಿ ಮಾಹಿತಿಯನ್ನು ದುರ್ಬಳಕೆ ಮಾಡುವುದು, ಅದನ್ನು ಬಳಸಿಕೊಂಡು ಬ್ಲಾಕ್‌ಮೇಲ್‌ಗೆ ಮುಂದಾಗುವ ಸಾಧ್ಯತೆ ಇರುತ್ತದೆ.
ಅನಂತ ಪ್ರಭು, ಸೈಬರ್ ತಜ್ಞ
ಮಕ್ಕಳ ಕೈಗೆ ಸ್ಮಾರ್ಟ್‌ಫೋನ್ ಬಂದಾಗಿದೆ. ಹಾಗಾಗಿ ಪಾಲಕರು ಹೆಚ್ಚು ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ. ಮಕ್ಕಳ ಚಟುವಟಿಕೆ ಮೇಲೆ ನಿಗಾ ಇರಿಸಬೇಕು.
ರೆನ್ನಿ ಡಿಸೋಜ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ದಕ್ಷಿಣ ಕನ್ನಡ