ರಚನಾತ್ಮಕ ಕಲಿಕೆಗೆ ಉಪಯೋಗವಾಗಲಿ ಮೊಬೈಲ್

HNR 2
Published on

ಹೊನ್ನಾವರ: ವ್ಯಾಕರಣ ದೋಷವಿಲ್ಲದಂತೆ ಇಂಗ್ಲಿಷ್‌ನಲ್ಲಿ ಮಾತನಾಡುವುದನ್ನು ಕಲಿತರೆ ಉತ್ತಮ ಉದ್ಯೋಗ ಪಡೆಯಲು ಹೆಚ್ಚಿನ ಅನುಕೂಲವಾಗುತ್ತದೆ’ ಎಂದು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ. ಗೌತಮ ಬಳ್ಕೂರ ಅಭಿಪ್ರಾಯಪಟ್ಟರು.

ಇಲ್ಲಿಯ ಎಸ್‌ಡಿಎಂ ಕಾಲೇಜಿನ ಇಂಗ್ಲಿಷ್ ವಿಭಾಗದ ಇಂಗ್ಲಿಷ್ ಲಿಟರರಿ ಕ್ಲಬ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹ ಪತ್ರಿಕೆ ’ಬ್ಲೂಮ್’ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ವಿದ್ಯಾರ್ಥಿಗಳು ಮೊಬೈಲ್‌ಫೋನನ್ನು ಕೇವಲ ಮನರಂಜನೆಯ ಮಾಧ್ಯಮವಾಗಿ ಬಳಸಿಕೊಳ್ಳದೆ ರಚನಾತ್ಮಕ ಕಲಿಕೆಗೆ ಉಪಯೋಗಿಸಬೇಕು. ಪೌಷ್ಟಿಕ ಆಹಾರ ಸೇವನೆ, ದೈಹಿಕ ಶ್ರಮ ಹಾಗೂ ಉತ್ತಮ ಹವ್ಯಾಸಗಳನ್ನು ಹೊಂದಿ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಡಿ.ಎಲ್. ಹೆಬ್ಬಾರ ಮಾತನಾಡಿ, ಪಾಠದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕು’ ಎಂದರು.

ಸುಮಾ ಭಟ್ಟ, ನಿಖಿತಾ ಖಾರ್ವಿ ಪ್ರಾರ್ಥನಾ ಗೀತೆ ಹಾಡಿದರು. ಇಂಗ್ಲಿಷ್ ಲಿಟರರಿ ಕ್ಲಬ್ ಸಂಯೋಜಕಿ ವೆಲೆನ್ಶಿಯಾ ಡಿಸೋಜಾ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಎಂ.ಜಿ. ಹೆಗಡೆ ಅತಿಥಿ ಪರಿಚಯ ಮಾಡಿದರು. ಉಪನ್ಯಾಸಕಿ ಕೆ.ಆರ್. ಶ್ರೀಲತಾ, ರಮ್ಯಾ ಮೇಸ್ತ, ಮಾಲತಿ ನಾಯ್ಕ ನಿರೂಪಿಸಿದರು. ಇಂಗ್ಲಿಷ್ ಲಿಟರರಿ ಕ್ಲಬ್‌ನ ಕಾರ್ಯದರ್ಶಿ ಸಹನಾ ಅಂಬಿಗ ವಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net