

ಶಿವಮೊಗ್ಗ: ಕಳೆದ ಹೋಗಿದ್ದ ಮೊಬೈಲ್ ಸಿಕ್ಕರೆ ಕೊಡಿ ಎಂದು ಕೇಳಿದ್ದಕ್ಕೆ ದಂಪತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೊಣ್ಣೆಯಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ನಾಲ್ವರಿಗೆ ಶಿಕಾರಿಪುರದ 1ನೇ ಅಧಿಕ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಮೂರು ವರ್ಷ ಸಾಧಾ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ ಆರು ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.
ಶಿಕಾರಿಪುರ ತಾಲೂಕಿನ ಕೊಳಗಿ ಗ್ರಾಮದ ಈಶ್ವರಪ್ಪ (55), ಗಣೇಶ್ (38), ರಾಘವೇಂದ್ರ (32) ಮತ್ತು ರತ್ನಮ್ಮ (48) ಶಿಕ್ಷೆಗೆ ಒಳಗಾದವರು. 2016 ಮಾ.13ರಂದು ಕೊಳಗಿ ಗ್ರಾಮದ ದಂಪತಿ ರಮೇಶ್ ಮತ್ತು ಹನುಮಂತಪ್ಪ ಮೇಲೆ ಹಲ್ಲೆ ನಡೆಸಿದ ಆರೋಪವಿತ್ತು. ದಂಪತಿ ಪುತ್ರ ಮೊಬೈಲ್ ಕಳೆದುಕೊಂಡಿದ್ದು ಸಿಕ್ಕರೆ ಕೊಡಿ ಎಂದು ಈಶ್ವರಪ್ಪ ಕುಟುಂಬದವರ ಬಳಿ ಕೇಳಿದ್ದರು.
ಇದರಿಂದ ಸಿಟ್ಟಿಗೆದ್ದ ಈಶ್ವರಪ್ಪ ಸೇರಿ ನಾಲ್ವರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ಈ ಬಗ್ಗೆ ಶಿರಾಳಕೊಪ್ಪ ಠಾಣೆಯಲ್ಲಿ ನಿಂದನೆ, ಹಲ್ಲೆ ಮತ್ತು ಜೀವ ಬೆದರಿಕೆ ಕುರಿತು ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಪಿಎಸ್‌ಐ ಡಿ.ಶಿವಕುಮಾರ್, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಬಗ್ಗೆ ಬುಧವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ಅವಿನಾಶ ಎಂ ಗಾಲಿ ಅವರು ನಾಲ್ವರ ಮೇಲಿನ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮೂರು ವರ್ಷ ಜೈಲು ಮತ್ತು 10 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎಸ್.ಎಂ.ಅರುಣಕುಮಾರ್ ವಾದ ಮಂಡಿಸಿದ್ದರು.