

ಅವಿನಾಶ್ ಜೈನಹಳ್ಳಿ ಮೈಸೂರು
ನಗರ ಕೇಂದ್ರ ಗ್ರಂಥಾಲಯದ ಕುವೆಂಪು ಸಂಚಾರಿ ಗ್ರಂಥಾಲಯ (ಮೊಬೈಲ್ ಲೈಬ್ರರಿ) ಎಂಟು ವರ್ಷ ಪೂರೈಸಿದ್ದು, ಪುಸ್ತಕ ಪ್ರೇಮಿಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ನಗರ ಕೇಂದ್ರ ಗ್ರಂಥಾಲಯದ ಶತಮಾನೋತ್ಸವ ಅಂಗವಾಗಿ ಮೊಬೈಲ್ ಲೈಬ್ರರಿಯನ್ನು ಆರಂಭಿಸಲಾಗಿತ್ತು. ಸದ್ಯ ಮೊಬೈಲ್ ಲೈಬ್ರರಿಯ ಸದಸ್ಯತ್ವ ಸಂಖ್ಯೆ 700ರ ಗಡಿ ತಲುಪಿದೆ.
ಪುಸ್ತಕ ಪ್ರೇಮಿಗಳು ಗ್ರಂಥಾಲಯಕ್ಕಿಂತ ಹೆಚ್ಚಾಗಿ ಬಡಾವಣೆಗಳಿಗೆ ಬರುತ್ತಿರುವ ಮೊಬೈಲ್ ಲೈಬ್ರರಿ ಕಡೆ ಮುಖ ಮಾಡಿದ್ದಾರೆ. ಅದರಲ್ಲೂ ಗೃಹಿಣಿಯರೇ ಹೆಚ್ಚು. ಗ್ರಂಥಾಲಯ ಸೇವೆಯಿಂದ ವಂಚಿತರಾಗಿರುವ ಸಾಂಸ್ಕೃತಿಕ ನಗರಿಯ ಪುಸ್ತಕ ಪ್ರೇಮಿಗಳಿಗೆ, ಅವರ ಮನೆ ಬಾಗಿಲಿಗೇ ಗ್ರಂಥಾಲಯ ಸೇವೆ ಒದಗಿಸಲು ನಗರ ಕೇಂದ್ರ ಗ್ರಂಥಾಲಯ 2016ರಲ್ಲಿ ಸಂಚಾರಿ ಗ್ರಂಥಾಲಯ ವ್ಯವಸ್ಥೆ ಜಾರಿಗೆ ತಂದಿತು. ಆರಂಭದಲ್ಲಿ 50ರಿಂದ 60 ಜನರು ಮಾತ್ರ ಸದಸ್ಯತ್ವ ಪಡೆದಿದ್ದರು. ಈಗ ಸದಸ್ಯತ್ವ ಸಂಖ್ಯೆ 700ಕ್ಕೂ ಹೆಚ್ಚಿದೆ. ಕಳೆದ ಒಂದು ವರ್ಷದಿಂದಲೇ 100ಕ್ಕೂ ಹೆಚ್ಚು ಜನರು ಸದಸ್ಯತ್ವ ಪಡೆದಿದ್ದಾರೆ.
ಎರಡು ವರ್ಷದ ಹಿಂದೆ ನಿತ್ಯ 20ರಿಂದ 30 ಕೃತಿಗಳನ್ನು ಸದಸ್ಯರು ಪಡೆದುಕೊಳ್ಳುತ್ತಿದ್ದರು. ಈಗ ಆ ಸಂಖ್ಯೆ ನೂರರ ಗಡಿ ದಾಟಿದೆ. ಹೊಸದಾಗಿ ಸದಸ್ಯತ್ವ ಪಡೆದುಕೊಳ್ಳಲು ಇನ್ನೂ ಅನೇಕರು ಅರ್ಜಿ ಪಡೆದುಕೊಂಡಿದ್ದಾರೆ. ಗ್ರಂಥಾಲಯಗಳಿಲ್ಲದ ವಾರ್ಡ್‌ಗಳಲ್ಲಿ ವಾರದಲ್ಲಿ ಒಂದು ದಿನ ಸೇವೆ ನೀಡುತ್ತಿದೆ. ಕಾವ್ಯ, ಕಥಾ ಸಂಕಲನ, ಇತಿಹಾಸ, ಸಾಹಿತ್ಯ, ಮಕ್ಕಳ ಸಾಹಿತ್ಯ ಸೇರಿದಂತೆ ಸುಮಾರು 10 ಸಾವಿರ ಪುಸ್ತಕಗಳು ಲಭ್ಯವಿವೆ.
ವಾಹನದಲ್ಲಿ ಒಬ್ಬ ಚಾಲಕ ಮತ್ತು ಗ್ರಂಥಸಹಾಯಕ ಕಾರ್ಯನಿರ್ವಹಿಸುತ್ತಿದ್ದಾರೆ. ಪುಸ್ತಕ ಎರವಲು ನೀಡುವ ತರಬೇತಿಯನ್ನು ಚಾಲಕನಿಗೂ ನೀಡಲಾಗಿದೆ. ಹಿರಿಯರ ಅನುಕೂಲಕ್ಕಾಗಿ ವಾಹನದಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಗ್ರಂಥಾಲಯದಲ್ಲಿ ಎರವಲು ಪಡೆದ ಪುಸ್ತಕಗಳನ್ನು 15 ದಿನದೊಳಗೆ ಹಿಂದಿರುಗಿಸಬೇಕು. ವಿಳಂಬವಾದರೆ ದಂಡ ನೀಡಬೇಕು. ಎರವಲು ಪಡೆದ ಪುಸ್ತಕ ಹರಿದರೆ, ಕಳೆದು ಹೋದರೆ ಅಥವಾ ಪುಸ್ತಕಕ್ಕೆ ಯಾವುದೇ ರೀತಿ ಹಾನಿಯಾದರೆ ಪುಸ್ತಕದ ಮುಖಬೆಲೆಯ ಹತ್ತರಷ್ಟು ಹಣವನ್ನು ಪಾವತಿಸಬೇಕು.
ನಗರ ಕೇಂದ್ರ ಗ್ರಂಥಾಲಯದ ಶತಮಾನೋತ್ಸವ ಆಚರಣೆ ಅಂಗವಾಗಿ ಕುವೆಂಪು ಸಂಚಾರಿ ಗ್ರಂಥಾಲಯವನ್ನು 25 ಲಕ್ಷ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ದೂರದ ಗ್ರಂಥಾಲಯಗಳಿಗೆ ತೆರಳುವ ಬದಲು, ತಮ್ಮ ಮನೆ ಮುಂದೆಯೇ ನೆಚ್ಚಿನ ಪುಸ್ತಕಗಳನ್ನು ಪಡೆದು ಓದಲು ಸಹಕಾರಿಯಾಗಿದೆ.
ನಗರದ 65 ವಾರ್ಡ್‌ಗಳ ಪೈಕಿ 40 ವಾರ್ಡ್‌ಗಳ ಜನರಿಗೆ ಸಂಚಾರಿ ಗ್ರಂಥಾಲಯ ಸೇವೆ ಲಭ್ಯವಿದೆ. ಎರಡು ವರ್ಷಗಳಿಗೂ ಹಿಂದೆ 35 ವಾರ್ಡ್‌ಗಳಿಗೆ ಸೀಮಿತವಾಗಿತ್ತು. ಪ್ರಸ್ತುತ 40 ವಾರ್ಡ್‌ಗಳಿಗೆ ಗ್ರಂಥಾಲಯ ಸೇವೆ ಸಿಗುತ್ತಿದ್ದು, ಹೆಚ್ಚುವರಿಯಾಗಿ 5 ವಾರ್ಡ್‌ಗಳಲ್ಲಿ ಮೊಬೈಲ್ ಲೈಬ್ರರಿ ಸಂಚರಿಸುತ್ತಿದೆ. ಪ್ರತಿ ವಾರ್ಡ್‌ಗೆ ವಾರಕ್ಕೊಮ್ಮೆ ವಾಹನ ತೆರಳಲಿದ್ದು, ನಿಗದಿಪಡಿಸಿದ ಜಾಗದಲ್ಲಿ 40 ನಿಮಿಷ ನಿಲುಗಡೆ ಮಾಡಲಾಗುತ್ತದೆ. ಚಾಮುಂಡಿಪುರಂ, ಶಾರದಾದೇವಿನಗರ, ದಟ್ಟಗಳ್ಳಿ ಸೇರಿದಂತೆ ವಿವಿಧೆಡೆ ಹೆಚ್ಚುವರಿ ನಿಲುಗಡೆಗೆ ಸಾರ್ವಜನಿಕರಿಂದ ಒತ್ತಾಯ ಕೇಳಿಬರುತ್ತಿದೆ. ಹೀಗಾಗಿ ಬೇಡಿಕೆ ಇಲ್ಲದೆಡೆ ಸಂಚಾರಿ ಸೇವೆ ರದ್ದುಗೊಳಿಸಿ, ಬೇಡಿಕೆ ಇರುವೆಡೆಗೆ ಸೇವೆ ಒದಗಿಸಲು ಚಿಂತನೆ ನಡೆಸಲಾಗಿದೆ. ಸಂಚಾರಿ ಗ್ರಂಥಾಲಯ ಸಂಪೂರ್ಣ ಗಣಕೀಕೃತವಾಗಿದೆ. ಬಾರ್‌ಕೋಡೆಡ್ ಸದಸ್ಯತ್ವ ಕಾರ್ಡ್ ಹೊಂದಿರುವವರಿಗೆ ಮಾತ್ರ ಪುಸ್ತಕಗಳನ್ನು ನೀಡಲಾಗುತ್ತಿದೆ. ಸಾರ್ವಜನಿಕರು ನಿಗದಿತ ಶುಲ್ಕ ಪಾವತಿಸಿ ಸದಸ್ಯತ್ವ ಪಡೆದುಕೊಳ್ಳಬಹುದು. ಸೋಮವಾರ ಮತ್ತು ಸರ್ಕಾರಿ ರಜೆ ದಿನಗಳಂದು ಸೇವೆ ಇರುವುದಿಲ್ಲ.
ನಗರ ಕೇಂದ್ರ ಗ್ರಂಥಾಲಯದ ಶತಮಾನೋತ್ಸವ ಆಚರಣೆ ಅಂಗವಾಗಿ ಪ್ರಾರಂಭಿಸಿದ ‘ಕುವೆಂಪು ಸಂಚಾರಿ ಗ್ರಂಥಾಲಯ’ಕ್ಕೀಗ ಎಂಟು ವರ್ಷದ ಸಂಭ್ರಮ. ಕುವೆಂಪು ಸಂಚಾರಿ ಗ್ರಂಥಾಲಯಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ನಗರದ ಬಹುತೇಕ ವಾರ್ಡ್‌ಗಳಿಗೆ ಈ ವಾಹನ ಸಂಚರಿಸುತ್ತಿದೆ. ಪ್ರತಿ ವಾರ್ಡ್‌ಗೆ ವಾರಕ್ಕೊಮ್ಮೆ ಸಂಚಾರಿ ಗ್ರಂಥಾಲಯದ ವಾಹನ ಭೇಟಿ ನೀಡಿ, ನಿಗದಿಪಡಿಸಿದ ಜಾಗದಲ್ಲಿ 40 ನಿಮಿಷ ನಿಲುಗಡೆ ಮಾಡಲಾಗುತ್ತಿದೆ.-ಬಿ.ಮಂಜುನಾಥ್ ಉಪನಿರ್ದೇಶಕ, ನಗರ ಕೇಂದ್ರ ಗ್ರಂಥಾಲಯ ಇಲಾಖೆ