ಮೊಬೈಲ್, ಇಂಟರ್‌ನೆಟ್ ಸದ್ಬಳಕೆ ನಮ್ಮ ಮುಂದಿನ ಸವಾಲು

CT 27 MURUGA VYASANA
Published on

ಚಿತ್ರದುರ್ಗ: ಕೋವಿಡ್ ಕಾರಣದಿಂದ ಮೊಬೈಲ್ ಹಾಗೂ ಇಂಟರ್‌ನೆಟ್ ಬಳಕೆ ಅಧಿಕವಾಗುತ್ತಿದ್ದು, ಇವುಗಳ ಸದ್ಬಳಕೆಯೇ ನಮ್ಮ ಮುಂದಿರುವ ಸವಾಲೆಂದು ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆ ಮನಃಶಾಸ್ತ್ರಜ್ಞ ಡಾ.ದೀಪಕ್ ಹೇಳಿದರು.

ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ವ್ಯಸನಮುಕ್ತ ಸಮಾಜ ವಿಚಾರ ಸಂಕಿರಣದಲ್ಲಿ ಮಾತನಾಡಿ, ಆನ್‌ಲೈನ್ ತರಗತಿಗೆಂದು ಕೊಡುವ ಮೊಬೈಲ್ ಸದ್ಬಳಕೆಯಾಗುತ್ತಿಲ್ಲ. ಪಾಠ ಕೇಳುವುದಕ್ಕಿಂತಲೂ ಆಕ್ಷೇಪಾರ್ಹ ಜಾಲತಾಣಗಳ ವೀಕ್ಷಣೆಗೆ ಬಳಕೆ ಆಗುತ್ತಿದ್ದು, ಇದು ನೆನಪಿನ ಶಕ್ತಿಗೆ ಕುತ್ತು ತರುತ್ತದೆ ಎಂದು ಎಚ್ಚರಿಸಿದರು.

ಮೊಬೈಲ್ ಫೋನ್, ಸಾಮಾಜಿಕ ಜಾಲತಾಣ ಹಾಗೂ ಆನ್‌ಲೈನ್ ಶಾಪಿಂಗ್ ಕೂಡ ವ್ಯಸನ ವ್ಯಾಪ್ತಿಗೆ ಸೇರಿದ್ದು, ಇದಕ್ಕೆ ಚಿಕಿತ್ಸೆ ಇದೆ. 15 ವರ್ಷಗಳಿಂದ ಈಚೆಗೆ ಮಹಿಳೆಯರೂ ನಾನಾ ವ್ಯಸನಗಳಿಗೆ ತುತ್ತಾಗುತ್ತಿದ್ದಾರೆ. ನಿಮ್ಹಾನ್ಸ್ ಸಮೀಕ್ಷೆಯಂತೆ ವ್ಯಸನಗಳಿಂದ ಮಾನಸಿಕ ತೊಂದರೆ ಹೆಚ್ಚಾಗುತ್ತಿದೆ.

ಬೇರೆ ಕಾಯಿಲೆಯಲ್ಲಿ ವ್ಯಕ್ತಿಯೊಬ್ಬರಿಗೆ ತೊಂದರೆಯಾದರೆ, ವ್ಯಸನದಿಂದ ಇಡೀ ಕುಟುಂಬ ಬಲಿಯಾಗಬೇಕಾಗುತ್ತದೆ. ತಂಬಾಕು, ಮದ್ಯದಂತಹ ಅಮಲು ಪದಾರ್ಥಗಳ ಸೇವನೆಯೂ ಅಧಿಕವಾಗಿದೆ. ತಂಬಾಕಿಗೆ ಶೇ.19 ಹಾಗೂ ಮದ್ಯಪಾನಕ್ಕೆ ಶೇ.5 ಜನರು ಬಲಿಯಾಗುತ್ತಿದ್ದಾರೆ. ದೇಶದ ಜನಸಂಖ್ಯೆಯಲ್ಲಿ ಶೇ.25 ಜನ ಒಂದಲ್ಲ ಒಂದು ರೀತಿಯಲ್ಲಿ ವ್ಯಸನಕ್ಕೆ ಒಳಗಾಗುತ್ತಿದ್ದಾರೆ ಎಂದರು.

ಹೊಸದಿಲ್ಲಿಯ ಕರ್ನಾಟಕ ಸರ್ಕಾರದ ಪ್ರತಿನಿಧಿ ಶಂಕರಗೌಡ ಪಾಟೀಲ್ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಶರಣ ಸಂಸ್ಕೃತಿಯಂಥ ಉತ್ಸವಗಳು ಹೆಚ್ಚಾಗಬೇಕು. ಪುಣ್ಯಕೋಟಿ ಸ್ಥಾನದಲ್ಲಿ ಶ್ರೀಮಠವಿದ್ದು, ಈ ಸ್ಥಳದ ಸ್ಪರ್ಶವೇ ಭಕ್ತಿಯ ಅನುಭಾವವನ್ನು ನೀಡುತ್ತದೆ ಎಂದರು.

ಡಾ.ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯ ವಹಿಸಿದ್ದರು. ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಶಾಂತವೀರ ಸ್ವಾಮೀಜಿ,ನಾನಾ ಮಠಾಧೀಶರು, ಹರಗುರು ಚರಮೂರ್ತಿಗಳಿದ್ದರು.

ಜ್ಞಾನ ಐತಾಳ ಮತ್ತು ಸಂಗಡಿಗರು, ಮಂಗಳೂರಿನ ಹೆಜ್ಜೆ ನಾದ ನ್ಯತ್ಯ ತಂಡ ಮತ್ತು ಚಿತ್ರದುರ್ಗದ ಶ್ವೇತಾಭಟ್ ಮತ್ತು ಸಂಗಡಿಗರು ಸಾಂಸ್ಕೃತಿಕ ಕಾರ‌್ಯಕ್ರಮಗಳನ್ನು ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net