

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾರ್ಮಿಕರಿಗಾಗಿ ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯ ವಾಹನಗಳಿಗೆ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಆರೋಗ್ಯ, ಸುರಕ್ಷತೆ ಹಿನ್ನಲೆಯಲ್ಲಿ ರಾಜ್ಯದ ಕಾರ್ಮಿಕ ಇಲಾಖೆಯಿಂದ ಪ್ರತಿ ಜಿಲ್ಲೆಯಲ್ಲಿ ಆರೋಗ್ಯ ಕ್ಲಿನಿಕ್ ಸಂಚಾರಿ ವಾಹನ ರೂಪಿಸಲಾಗಿದೆ. ಕಾರ್ಮಿಕರು ಮತ್ತು ಅವರ ಮಕ್ಕಳು ಆರೋಗ್ಯವಾಗಿರಲಿ ಎಂಬ ದೃಷ್ಟಿಯಿಂದ ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣವಾಗುವ ಪ್ರದೇಶಕ್ಕೆ ಹೋಗಿ, ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆಯಡಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಎಂದರು.
ಜ್ವರ, ಕೆಮ್ಮು, ಮಧುಮೇಹ, ರಕ್ತದೊತ್ತಡ, ರಕ್ತ ಪರೀಕ್ಷೆ ಸೇರಿ ಸುಮಾರು 20 ಪ್ಯಾರಾ ಮೀಟರ್ಗಳ ಅನ್ವಯ ಕಾರ್ಮಿಕರ ಹಾಗೂ ಸಂಬಂಧಿಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ತಪಾಸಣೆ ಕುರಿತ ದಾಖಲೆಗಳು ಆನ್ಲೈನ್ ಮೂಲಕ ನೇರವಾಗಿ ಇಲಾಖೆ ಮುಖ್ಯ ಕಚೇರಿಗೆ ತಲುಪುತ್ತದೆ ಎಂದರು.
ಸಂಚಾರಿ ಆರೋಗ್ಯ ಘಟಕಗಳಲ್ಲಿ 25 ವೈದ್ಯಕೀಯ ಉಪಕರಣಗಳು, 5 ಪ್ರಯೋಗಾಲಯದ ಉಪಕರಣಗಳು ಹಾಗೂ 37 ವಿವಿಧ ವೈದ್ಯಕೀಯ ಬಳಕೆ ವಸ್ತುಗಳು ಇರಲಿವೆ. ಈ ಕುರಿತು ಕಾರ್ಮಿಕ ಇಲಾಖೆ ಅಧಿಕಾರಿಗಳು ನಿಗಾ ವಹಿಸುತ್ತಾರೆ ಎಂದರು.
ಶಾಸಕರಾದ ಅರವಿಂದ ಬೆಲ್ಲದ, ಎನ್.ಎಚ್.ಕೋನರಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಿಇಒ ಭುವನೇಶ ಪಾಟೀಲ, ಎಸ್ಪಿ ಡಾ. ಗೋಪಾಲ ಬ್ಯಾಕೋಡ್, ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಹುಡಾ ಅಧ್ಯಕ್ಷ ಶಾಕೀರ ಸನದಿ, ಇಲಾಖೆ ಸಹಾಯಕ ಆಯುಕ್ತ ಸಚಿನ್, ಜಿಲ್ಲಾ ಅಧಿಕಾರಿಗಳು, ಇತರರು ಇದ್ದರು.