‘ಅಕ್ಕನಮನೆ ಮೀನೂಟ’ದ ಸವಿ: ಮಹಿಳೆಯರಿಗಾಗಿ ಸ್ವಾವಲಂಬಿ ಉದ್ದಿಮೆ

Mobile canteen project implemented Mandya
Published on

ಮಂಡ್ಯ: ಮಹಿಳೆಯರಿರು ಸ್ವಾವಲಂಬಿ ಉದ್ದಿಮೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿಯಿಂದ ‘ಅಕ್ಕನ ಮನೆ ಮೀನೂಟ’ ಸಂಚಾರಿ ಕ್ಯಾಂಟೀನ್ ಯೋಜನೆ ಜಾರಿಗೊಳಿಸಲಾಗುತ್ತಿದೆ. ವಿಶೇಷವೆಂದರೆ ರಾಜ್ಯದಲ್ಲಿಯೇ ಹೆಚ್ಚು ಕ್ಯಾಂಟೀನ್‌ಗಳನ್ನು ಜಿಲ್ಲೆಗೆ ನೀಡಲಾಗಿದೆ.

ಸಂಜೀವಿನಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದಿಂದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲಾ ಪಂಚಾಯಿತಿ, ಮೀನುಗಾರಿಕೆ ಇಲಾಖೆ ಮತ್ತು ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಮಂಗಳೂರು ಸಹಯೋಗದೊಂದಿಗೆ ಜಿಲ್ಲೆಯ ಸಂಜೀವಿನಿ ಒಕ್ಕೂಟದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಅಕ್ಕ ಮೀನಿನ ಸಂಚಾರಿ ಕ್ಯಾಂಟೀನ್‌ಗಳನ್ನು ‘ಅಕ್ಕನ ಮನೆ ಮೀನೂಟ’ ಎನ್ನುವ ವಿಭಿನ್ನ ಹೆಸರಿನ ಮೂಲಕ ಅಭಿವೃದ್ಧಿಪಡಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಒಳನಾಡು ಸಿಹಿ ನೀರಿನ ಮೀನುಗಾರಿಕೆಗೆ ವಿಫುಲ ಅವಕಾಶವಿದೆ. ಇದರ ಜತೆಗೆ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಮಂಗಳೂರು ಮೂಲಕ ಸಮುದ್ರದ ಮೀನುಗಳ ಖಾದ್ಯವನ್ನು ಸುಲಭ ದರದಲ್ಲಿ ಸವಿಯುವ ಯೋಜನೆಯೊಂದಿಗೆ ಹಾಗೂ ಉತ್ತಮ ಪೋಷಕಾಂಶವಿರುವ ಮೀನಿನ ಸೇವನೆಯ ಮಹತ್ವವನ್ನು ತಿಳಿಸುವ ಧ್ಯೇಯೋದ್ದೇಶದೊಂದಿಗೆ ಚಟುವಟಿಕೆ ಪ್ರಾರಂಭಿಸಲಾಗಿದೆ. ಬಹಳ ಮುಖ್ಯವಾಗಿ ಗ್ರಾಮೀಣ ಭಾಗದ ಸಂಜೀವಿನಿ ಮಹಿಳೆಯರು ಮೀನುಗಾರಿಕೆ ಇಲಾಖೆ ಮತ್ತು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಸಹಕಾರ ಪಡೆದು ಒಕ್ಕೂಟದ ಸಮುದಾಯ ಸುತ್ತು ನಿಧಿಯ ನೆರವಿನ ಮೂಲಕ ಮತ್ಸ್ಯವಾಹಿನಿಯಲ್ಲಿ ಶುಚಿ-ರುಚಿಯಾದ ಒಲವಿನ ಊಟವನ್ನು ತಯಾರಿಸಿ, ಸಾರ್ವಜನಿಕರಿಗೆ ಉಣಬಡಿಸಲು ಜಿಲ್ಲಾ ಪಂಚಾಯಿತಿ ಮೂಲಕ ಮಹಿಳೆಯರ ಬಲವರ್ಧನೆಗಾಗಿ ಹೊಸದಾದ ಯೋಜನೆ ರೂಪಿಸಲಾಗಿದೆ.

ಮೊದಲಿಗೆ ಜಿಲ್ಲಾ ಪಂಚಾಯಿತಿ ಮೂಲಕ ಆರ್ಥಿಕವಾಗಿ ಹಿಂದುಳಿದ ಸ್ವಾವಲಂಬನೆ ಜೀವನ ಬಯಸಿ ಮುನ್ನಡೆಯಲು ಹಂಬಲಿಸುತ್ತಿರುವ 11 ಒಕ್ಕೂಟಗಳ ಸ್ವ-ಸಹಾಯ ಸಂಘದ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ. ನಂತರದಲ್ಲಿ ಒಕ್ಕೂಟಗಳ ಬೇಡಿಕೆಯಂತೆ ರಾಜ್ಯದ ಮೀನುಗಾರಿಕೆ ಇಲಾಖೆಯ ಮೂಲಕ ಜಿಲ್ಲೆಗೆ 11 ಮತ್ಸ್ಯವಾಹಿನಿ ವಾಹನಗಳನ್ನು ಪಡೆಯಲಾಗಿದೆ. ಬಳಿಕ ಆಯ್ದ ಒಕ್ಕೂಟಗಳ ಸ್ವ-ಸಹಾಯ ಸಂಘದ ಮಹಿಳೆಯರಿಗೆ ವಿದ್ಯುತ್ ಚಾಲಿತ ವಾಹನವನ್ನು ಬಳಸಲು ಹಾಗೂ ಉತ್ತಮ ಗುಣಮಟ್ಟದ ಮೀನಿನ ಖಾದ್ಯಗಳನ್ನು ತಯಾರಿಸುವ ಬಗ್ಗೆ ತರಬೇತಿ ಹಮ್ಮಿಕೊಳ್ಳಲಾಗಿದ್ದು, ತರಬೇತಿಯು ಆರ್‌ಸೆಟಿ ಸಹಯೋಗದೊಂದಿಗೆ ಪ್ರಾರಂಭಗೊಂಡಿದೆ. ನಂತರ ಅವರಿಗೆ ಒಂದೇ ರೀತಿಯ ಸಮವಸ್ತಗಳನ್ನು ಕೂಡ ಒದಗಿಸುವ ಕಾರ್ಯವನ್ನು ಮಾಡಲಾಗಿದೆ. ಇನ್ನೇನು ಕೆಲವೆ ದಿನಗಳಲ್ಲಿ ನಮ್ಮ ಜಿಲ್ಲೆಯ ಮಹಿಳೆಯರು ಸಾರ್ವಜನಿಕರಿಗೆ ಸುಲಭ ದರದಲ್ಲಿ ಮೀನಿನ ಖಾದ್ಯವನ್ನು ಒದಗಿಸಲಿದ್ದಾರೆ. ಆ ಮೂಲಕ ಆರ್ಥಿಕವಾಗಿ ಬಲವರ್ಧನೆಯಾಗುವತ್ತಾ ನಮ್ಮ ಜಿಲ್ಲೆಯ ಮಹಿಳೆಯರು ಹೆಜ್ಜೆ ಇಟ್ಟಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ.

ಜನದಟ್ಟಣೆ ಪ್ರದೇಶದಲ್ಲಿ ಮೀನೂಟ

ಜಿಲ್ಲಾ ಪಂಚಾಯಿತಿಯ ಮತ್ತೊಂದು ಉತ್ತಮ ಪ್ರಯತ್ನಕ್ಕೆ ಪೂರಕವಾಗಿ ಕೆಲ ಕ್ರಮ ವಹಿಸುತ್ತಿದೆ. ಅದರಂತೆ ಅಕ್ಕ ಮೀನಿನ ಕ್ಯಾಂಟೀನ್‌ಗಳು ಜಿಲ್ಲೆಯಲ್ಲಿ ಹೆಚ್ಚಿನ ಜನದಟ್ಟಣೆ ಇರುವಂತಹ ಸ್ಥಳಗಳು ಮತ್ತು ಪ್ರವಾಸಿಗರು ಹೆಚ್ಚು ಆಗಮಿಸುವ ಸ್ಥಳಗಳಲ್ಲಿ ಅಕ್ಕ ಮೀನಿನ ಕ್ಯಾಂಟೀನ್ ತೆರೆಯಲಾಗುತ್ತಿದೆ. ಪ್ರವಾಸಿಗರು ಈ ಕ್ಯಾಂಟೀನ್‌ಗಳಿಂದ ಉತ್ತಮ ಗುಣಮಟ್ಟದ ಮೀನಿನ ಖಾದ್ಯಗಳನ್ನು ಸುಲಭ ದರದಲ್ಲಿ ಸವಿಯಲು ಯೋಜನೆ ರೂಪಿಸಲಾಗಿದೆ.

ಮಳವಳ್ಳಿ ತಾಲೂಕಿನಲ್ಲಿ 5, ಶ್ರೀರಂಗಪಟ್ಟಣದಲ್ಲಿ 2, ಕೆ.ಆರ್.ಪೇಟೆ ಹಾಗೂ ನಾಗಮಂಗಲದಲ್ಲಿ ತಲಾ ಒಂದು, ಪಾಂಡವಪುರದಲ್ಲಿ 2, ಮಂಡ್ಯ ತಾಲೂಕಿನಲ್ಲಿ 2 ಸೇರಿದಂತೆ ಒಟ್ಟು 13 ಮೀನಿನ ಸಣ್ಣ ಕ್ಯಾಂಟೀನ್‌ಗಳ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಒಟ್ಟು 24 ಮೀನಿನ ಕ್ಯಾಂಟೀನ್‌ಗಳಿಂದ ಸುಮಾರು 100ಕ್ಕೂ ಹೆಚ್ಚು ಮಹಿಳೆಯರು ಸ್ವಾವಲಂಬಿ ಉದ್ದಿಮೆ ಸ್ಥಾಪಿಸಬಹುದು. ಆ ಮೂಲಕ ಕುಟುಂಬದ ಜೀವನ ಮಟ್ಟವನ್ನು ಸುಧಾರಿಸುವುದರ ಜತೆಗೆ ಯಶಸ್ವಿ ಸಣ್ಣ ಉದ್ದಿಮೆದಾರರಾಗಿ ನಮ್ಮ ಮಹಿಳೆಯರು ರೂಪುಗೊಳ್ಳುವಂತಾಗಲು ಜಿಪಂ ಯೋಜನೆ ಅನುಷ್ಠಾನಗೊಳಿಸುತ್ತಿದೆ.

ಜಿಲ್ಲಾ ಪಂಚಾಯಿತಿಯ ಅಭಿಯಾನ ನಿರ್ವಹಣಾ ಘಟಕ ಮತ್ತು ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಮಂಗಳೂರು ಸಹಯೋಗದಲ್ಲಿ ಯೋಜನೆ ಜಾರಿಯಾಗುತ್ತಿದೆ. ಜಿಪಂ ಸದಾ ಮಹಿಳೆಯರ ಏಳಿಗೆಗಾಗಿ ಸಂಕಲ್ಪ ಬದ್ಧವಾಗಿದೆ. ಈ ಕಾರ್ಯದ ಯಶಸ್ವಿಗೆ ಶ್ರಮಿಸಿದ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ಮೀನುಗಾರಿಕೆ ಇಲಾಖೆ ಸಿಬ್ಬಂದಿ, ಎನ್‌ಆರ್‌ಎಲ್ಎಂ ಸಿಬ್ಬಂದಿ ಹಾಗೂ ಸಂಜೀವಿನಿ ಒಕ್ಕೂಟದ ಮಹಿಳೆಯರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ. ಯೋಜನೆಯ ಯಶಸ್ವಿಗೆ ಎಲ್ಲರು ಶ್ರಮಿಸಿ ಜಿಲ್ಲೆ ಪ್ರಗತಿ ಸಾಧಿಸುವಂತಾಗಲಿ ಎಂದು ಆಶಿಸುತ್ತೇನೆ. ಇದೇ ರೀತಿ ಮತ್ತಷ್ಟು ಉತ್ತಮ ಯೋಜನೆಗಳ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ಪಡೆಯುವಂತಾಗಲಿ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.

ಫಲಾನುಭವಿಗಳಿಗೆ ತರಬೇತಿ

ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಜಿಲ್ಲಾ ಪಂಚಾಯಿತಿ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಮತ್ಸ್ಯವಾಹಿನಿ ಮತ್ತು ಫಿಶ್ ಕ್ಯಾಂಟೀನ್ ಫಲಾನುಭವಿಗಳಿಗೆ ಜಿಪಂ ಕಚೇರಿ ಸಭಾಂಗಣದಲ್ಲಿ ತರಬೇತಿ ನೀಡಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು ಎಂಬುದು ನಮ್ಮ ಆಶಯ ಎಂದರು.

ಶಾಸಕರಾದ ರವಿಕುಮಾರ್ ಗಣಿಗ, ಕೆ.ಎಂ.ಉದಯ್, ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಸಿಇಒ ಕೆ.ಆರ್.ನಂದಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net