

ಹುಬ್ಬಳ್ಳಿ: ಇಲ್ಲಿಯ ರಾಷ್ಟ್ರೊತ್ಥಾನ ರಕ್ತನಿಧಿ ಸಹಯೋಗದಲ್ಲಿ ನಗರದ ಕುಸುಗಲ್ ರಸ್ತೆಯಲ್ಲಿ ಆರಂಭಿಸಲಾದ ಸಂಚಾರಿ ರಕ್ತದಾನ ವಾಹನ ಹಾಗೂ ಜಾಗೃತಿ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ರಕ್ತದಾನಕ್ಕೆ ಮನಸ್ಸಿದ್ದರೂ ಬಿಡುವಿಲ್ಲದ ಕೆಲಸಗಳ ಮಧ್ಯೆ ಶಿಬಿರಗಳಿಗೆ ಹೋಗಲು ಸಾಧ್ಯವಾಗದ ಅನೇಕ ಜನರಿಗೆ ಇದು ಸಹಕಾರಿಯಾಗಲಿದೆ. ಇದರಲ್ಲಿ ರಕ್ತದಾನಿಗಳಿಗೆ ಅವಶ್ಯಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಎಲ್ಲ ಸುರಕ್ಷತೆ ಕ್ರಮಗಳನ್ನು ಅನುಸರಿಸಿ ದಾನಿಯಿಂದ ರಕ್ತ ಪಡೆಯಲಾಗುತ್ತದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಲು ಮನವಿ ಮಾಡಲಾಯಿತು.
ಅಗತ್ಯ ಇರುವವರಿಗೆ ರಕ್ತ ಒದಗಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದೆ. ಪ್ರತಿ ಬುಧವಾರ ಬೆಳಗ್ಗೆ 8.30ಕ್ಕೆ ಕೇಶ್ವಾಪುರದ ಮ್ಯಾಕ್ಸ್ ಮಾಲ್ ಬಳಿ ಈ ವಾಹನ ನಿಲ್ಲಲಿದೆ. ಆಸಕ್ತರು, ರಕ್ತದಾನ ಮಾಡಬಹುದು ಎಂದು ತಿಳಿಸಲಾಯಿತು.
ರಾಷ್ಟ್ರೊತ್ಥಾನ ರಕ್ತನಿಧಿ ಕೇಂದ್ರದ ಅಭಿವೃದ್ಧಿ ಟಕದ ಸದಸ್ಯ ವಿನೋದಕುಮಾರ ಪಟ್ವಾ, ಉದ್ಯಮಿ ದಿಲೀಪ ಮುನೋತ್, ಡಾ. ದಿಲೀಪ ನೀರಲಗಿ, ನಿರ್ಮಲ ಭಂಡಾರಿ, ಮೆಹಲ್ ಕಲಾಲ, ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ ಇತರರು ಪಾಲ್ಗೊಂಡಿದ್ದರು.