

ಕೆ.ಎಂ.ದೊಡ್ಡಿ: ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಒಂದು ಕಾಲಹರಣ ಸಾಧನವಾಗಿದೆ ಎಂದು ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಡಾ.ಭೀಮರಾಜು ಈರೇಗೌಡ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಭಾರತಿ ವಿದ್ಯಾ ಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಪಿಯು ಕಾಲೇಜಿನ ವತಿಯಿಂದ ಕಲಾ ಮತ್ತು ವಾಣಿಜ್ಯ ವಿಭಾಗದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಇತ್ತೀಚೆಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಮೊಬೈಲ್ ಅನ್ನು ಕಲಿಕಾ ಯಂತ್ರವಾಗಿ ವಿದ್ಯಾರ್ಥಿಗಳು ಬಳಸಿಕೊಂಡರೆ ಅದರಿಂದಲೂ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ವಿದ್ಯಾಥಿಗಳು ಕಾರ್ಯೋನ್ಮುಖರಾಗಬೇಕು. ನಮ್ಮಲ್ಲಿ ಜ್ಞಾನ ಇಲ್ಲವಾದರೆ ಅದು ನಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ನಮ್ಮ ಆಲೋಚನಾ ಶಕ್ತಿಯನ್ನೇ ಹಾಳು ಮಾಡಿಬಿಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ವಸ್ತುವನ್ನಾಗಲಿ, ಯಂತ್ರವನ್ನಾಗಲಿ ಅಥವಾ ಕಲಿಕೆಯನ್ನಾಗಲಿ ವಿಭಿನ್ನ ರೀತಿಯಲ್ಲಿ ಬಳಸುವುದರಿಂದ, ಕಲಿಯುವುದರಿಂದ ಮಾತ್ರ ಅದ್ಭುತವಾದ ಜೀವನವನ್ನು ರೂಪಿಸಿಕೊಳ್ಳಬಹುದು ಎಂದರು.
ಜ್ಞಾನಾರ್ಜನೆ ಹೊಂದಿಲ್ಲದಿದ್ದರೆ ಆಧುನಿಕ ಪ್ರಪಂಚಕ್ಕೆ ನಾವು ಯಾವ ಕಾಲಕ್ಕೂ ಲೆಕ್ಕಕ್ಕಿಲ್ಲದ ಸವಕಲು ನಾಣ್ಯಗಳಾಗುತ್ತೇವೆ. ನಾಣ್ಯ ಚಲಾವಣೆ ಇರಬೇಕೆಂದರೆ ಜ್ಞಾನ ಅಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯತ್ತ ಚಿತ್ತ ಹರಿಸಬೇಕು ಎಂದರು.
ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಎಸ್.ಜವರೇಗೌಡ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಕಾಲೇಜು ಜೀವನದಲ್ಲಿ ಕಲಿಯಬೇಕಾದದ್ದು ಬೇಕಾದಷ್ಟಿದೆ. ಗ್ರಂಥಾಲಕ್ಕೆ ತೆರಳಿ ಸಾಮಾನ್ಯ ಜ್ಞಾನದ ಬಗ್ಗೆ ಅಧ್ಯಯನ ಮಾಡಿದರೆ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಲಿತವಾಗಿ ಎದುರಿಸಬಹುದು ಎಂದರು.
ಕಾಲೇಜಿನ ಪ್ರಾಂಶುಪಾಲೆ ಜಿ.ಬಿ.ಪಲ್ಲವಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಕೆ.ಟಿ.ಗಣೇಶ್, ಬಿ.ಕೆ.ಕೃಷ್ಣ, ಸಾಂಸ್ಕೃತಿಕ ಸಂಚಾಲಕಿ ಮಾನಸಾ, ಟಿ.ಎಚ್.ದಿವ್ಯಶ್ರೀ, ಸಿ.ಸುಮಿತ್ರಾ ಇದ್ದರು.