

ಬೆಂಗಳೂರು:ರಾಜಧಾನಿಯಲ್ಲಿ ರಸ್ತೆಗುಂಡಿಗಳನ್ನು ಪಾರದರ್ಶಕವಾಗಿ ಗುರುತಿಸಲು, ನಿಗದಿತ ಅವಧಿಯಲ್ಲಿ ದುರಸ್ಥಿಪಡಿಸಲು ಬಿಬಿಎಂಪಿ, ಸುಲಲಿತ ತಂತ್ರಜ್ಞಾನ ಹೊಂದಿರುವ "ರಸ್ತೆಗುಂಡಿ ಗಮನ-ಮೊಬೈಲ್ ಅಪ್ಲಿಕೇಷನ್ನ್ನು ಶನಿವಾರ ಬಿಡುಗಡೆ ಮಾಡಿದೆ.
ನಗರದಲ್ಲಿರುವ ಅಂದಾಜು 12,878 ಕಿ.ಮೀ.ಉದ್ದದ ರಸ್ತೆಗಳ ಪೈಕಿ 1,344 ಕಿ.ಮೀ. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳು, 11,533 ಕಿ.ಮೀ.ರಸ್ತೆಗಳು ವಲಯ ಮಟ್ಟದಲ್ಲಿವೆ. ರಸ್ತೆಗಳ ತಳಭಾಗದಲ್ಲಿ ಬೆಸ್ಕಾಂ ಕೇಬಲ್, ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳು, ಗೇಲ್ ಗ್ಯಾಸ್ ಕೊಳವೆಗಳು, ಕೆಪಿಟಿಸಿಎಲ್ ಕೇಬಲ್, ಒಎ್ಸಿ ಕೇಬಲ್ ಅಳವಡಿಸಲಾಗಿದೆ. ಇದರಿಂದಾಗಿ ರಸ್ತೆಯ ಮೇಲ್ಮೆ ಭಾಗವು ಶಿಥಿಲಗೊಂಡು ನಿರಂತರವಾಗಿ ರಸ್ತೆಯಲ್ಲಿ ಗುಂಡಿಗಳು ಬೀಳುತ್ತಿವೆ. ಇದನ್ನು ತಡೆಗೆ ಜಿಪಿಎಸ್ ಆಧಾರದಲ್ಲಿ ರಸ್ತೆಗಳಲ್ಲಿ ಉಂಟಾಗುವ ಗುಂಡಿಗಳನ್ನು ನಿಖರವಾಗಿ ಗುರುತಿಸಿ ಮುಚ್ಚಲು ಮೊಬೈಲ್ ಅಪ್ಲಿಕೇಷನ್ ತಯಾರಿಸಲಾಗಿದೆ. ಈ ತಂತ್ರಾಂಶವನ್ನು ಪಾಲಿಕೆಗೆ ಅಳವಡಿಸಿಕೊಳ್ಳುವುದರಿಂದ ರಸ್ತೆಗುಂಡಿ ಗುರುತಿಸುವಿಕೆ, ದುರಸ್ತಿ ಕಾರ್ಯವೂ ಸುಗಮವಾಗಿ ನಡೆಯಲಿದೆ. ಜತೆಗೆ, ರಸ್ತೆಗುಂಡಿ ವೆಚ್ಚದ ಮೇಲೆ ನಿಯಂತ್ರಣ, ಹೊಣೆಗಾರಿಕೆಯನ್ನು ಸಂಬಂಧಪಟ್ಟ ಅಧಿಕಾರಿಗಳು ನಿಗಾವಹಿಸಲು ಸಾಧ್ಯವಾಗಲಿದೆ.
33.75 ಕೋಟಿ ರೂ.ಮೀಸಲು: ಪ್ರಸಕ್ತ ಸಾಲಿನಲ್ಲಿ ಪ್ರತಿ ವಾರ್ಡ್ಗೆ 15 ಲಕ್ಷ ರೂ.ನಂತೆ 225 ವಾರ್ಡ್ಗಳಿಗೆ 33.75 ಕೋಟಿ ರೂ. ಮೀಸಲಿಡಲಾಗಿದೆ. ಈ ತಂತ್ರಾಂಶವು ನಾವೀನ್ಯತೆವುಳ್ಳ ಯೋಜನೆಯಾಗಿದೆ. ಪಾಲಿಕೆಯಲ್ಲಿ ರಸ್ತೆ ಗುಂಡಿ ಗುರುತಿಸಿ, ನಿಗದಿತ ಅವಧಿಯಲ್ಲಿ ದುರಸ್ಥಿ ಕಾರ್ಯ ಬಗ್ಗೆ ಉಸ್ತುವಾರಿ ವಹಿಸಲು, ಆಗುವ ವೆಚ್ಚ ಮೇಲೆ ನಿಯಂತ್ರಣ ಹೊಂದಲು ಅನುಕೂಲವಾಗುವುದಲ್ಲದೆ ಸಾಂದರ್ಭಿಕವಾಗಿ ಅಂದಾಜು ಪಟ್ಟಿ ತಯಾರಿಸುವ ಕ್ರಮಕ್ಕೂ ಕಡಿವಾಣ ಬೀಳಲಿದೆ. ರಸ್ತೆಗುಂಡಿ ದುರಸ್ತಿ ಬಗ್ಗೆ ಮಾನವ ರಹಿತ ಮಾಹಿತಿ ಒದಗಿಸಲು, ಮೊಬೈಲ್ನಲ್ಲಿ ಎಸ್ಎಂಎಸ್ ಮುಖೇನ ತೆಗೆದುಕೊಂಡು ಕ್ರಮದ ಬಗ್ಗೆ ಮಾಹಿತಿ ರವಾನಿಸಬಹುದು.
ಸಾರ್ವಜನಿಕರಿಗೆ ಅವಕಾಶ: ತಂತ್ರಾಂಶದಲ್ಲಿ ಪಾಲಿಕೆ, ಸಂಚಾರಿ ಪೊಲೀಸ್ ಇಲಾಖೆ ಅಧಿಕಾರಿಗಳು ಮಾತ್ರವಲ್ಲದೆ ಸಾರ್ವಜನಿಕರೂ ರಸ್ತೆಗುಂಡಿಗಳ ಭಾವಚಿತ್ರಗಳನ್ನು ಮೊಬೈಲ್ ಅಪ್ಲಿಕೇಷನ್ನಲ್ಲಿ ಅಪ್ಲೋಡ್ ಮಾಡುವ ಅವಕಾಶವಿದೆ. ತಂತ್ರಾಂಶವನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿದೆ. ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ಮೇಲೆ ಕ್ಲಿಕ್ ಮಾಡಿದರೆ ಎಸ್ಎಂಎಸ್ ಮೂಲಕ ಒನ್ಟೈಮ್ ಪಾಸ್ವಾರ್ಡ್ ಬರಲಿದೆ. ಆ ಸಂಖ್ಯೆಯನ್ನು ನಮೂದಿಸಿದ ಕೂಡಲೇ "ರಸ್ತೆ ದುರಸ್ತಿ' ಎಂದು ತೋರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನೀವು ನಿಂತ ಜಾಗದ ವಿಳಾಸದ ಸಮೇತ ಲೋಕಷೇನ್ ತೋರಿಸಲಿದೆ. ಆಗ ಸ್ಥಳದಲ್ಲಿರುವ ರಸ್ತೆ ದುರಸ್ತಿ ಕುರಿತು ಭಾವಚಿತ್ರ ಲಗತ್ತಿಸಿ, ಸ್ಥಳದಲ್ಲಿರುವ ಸಮಸ್ಯೆ ಕುರಿತು ವಿವರಣೆ ಬರೆಯಬಹುದು. ನಂತರ, ದೂರು ಸಲ್ಲಿಸುವ ಮುಂಚೆ ಒಮ್ಮೆ "ಪರಿಶೀಲಿಸಿಕೊಳ್ಳಲು' ಅವಕಾಶವಿದೆ. ಎಲ್ಲವನ್ನೂ ಪರಿಶೀಲಿಸಿದ ನಂತರ "ಸಲ್ಲಿಸಿ' ಎಂಬುದರ ಮೇಲೆ ಕ್ಲಿಕ್ ಮಾಡಿದರೆ ದೂರು ದಾಖಲಾಗಿ "ದೂರಿನ ಸಂಖ್ಯೆ' ಕೂಡ ಸಿಗಲಿದೆ.