

ಚಿಮ್ಮಡ: ಬೇರೆ ವ್ಯಸನಗಳಿಂತ ಮೊಬೈಲ್ ವ್ಯಸನ ಮಾರಕವಾಗಿದ್ದು, ಈ ಕುರಿತು ಪಾಲಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಆಧ್ಯಾತ್ಮಿಕ ಚಿಂತಕ ಪ್ರದೀಪ ಮೆಟಗುಡ್ ಹೇಳಿದರು.
ಗ್ರಾಮದ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವಿರಕ್ತ ಮಹಾಸ್ವಾಮಿಗಳ 32ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಚಿಂತನಗೋಷ್ಠಿ ಹಾಗೂ ಸಾಧಕರ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉನ್ನತ ಶಿಕ್ಷಣದ ಅಮಲಿನಲ್ಲಿ ತಮ್ಮ ಮಕ್ಕಳನ್ನು ಪರದೇಶಗಳಿಗೆ ಕಳುಹಿಸುವ ಮೂಲಕ ತಂದೆ ತಾಯಿಯರು ತಾವೇ ಪರದೇಶಿಗಳಾದ ಹಲವಾರು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಮಕ್ಕಳು ಎಷ್ಟೇ ಕಲಿತರು ಅವರು ನಮ್ಮ ಕಣ್ಣಮುಂದೇಯೇ ಇರುವಂತೆ ನೋಡಿಕೊಳ್ಳುವ ಅಗತ್ಯವಿದೆ. ಇಂದು ಧಾರ್ಮಿಕ ಪ್ರವಚನ ಕೇಳುವವರಿಗಿಂತ ಅಶ್ಲೀಲ ಜಾನಪದ ಹಾಡುಗಳನ್ನು ಕೇಳುವ ಯುವಕರು ಹೆಚ್ಚಾಗಿದ್ದು ಇದಕ್ಕೆ ಪಾಲಕರಿಗೆ ತಮ್ಮ ಮಕ್ಕಳ ಮೇಲಿರುವ ನಿರಾಸಕ್ತಿಯೇ ಕಾರಣ ಎಂದರು.
ಬನಹಟ್ಟಿ ಹಿರೇಮಠದ ಶ್ರೀ ಶರಣಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ ಎಲ್ಲ ಕಾಲಕ್ಕೂ, ಎಲ್ಲಿರಿಗೂ ಸಲ್ಲುವ ತತ್ವವೆಂದರೆ ಅದು ಬಸವತತ್ವ. ಇದನ್ನು ಪ್ರತಿಯೊಬ್ಬರು ಅನುಸರಿಸಬೇಕಾಗಿದೆ ಎಂದರು.
ಸ್ಥಳಿಯ ವಿರಕ್ತಮಠದ ಪ್ರಭು ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಮಲ್ಲಯ್ಯ ಹಿಡಕಲ್‌ಮಠ, ಬನಹಟ್ಟಿ ಪದವಿ ವಿದ್ಯಾಲಯದ ಪ್ರಾಂಶುಪಾಲ ಎಸ್.ಆರ್. ಹಂದಿಗುಂದ, ಜಿಎಲ್‌ಬಿಸಿ ಅಧೀಕ್ಷಕ ವಿರುಪಾಕ್ಷ ಕಾಜಗಾರ, ಮಹಾಲಿಂಗ ಕುಂಬಾರ ಮತ್ತಿತರರಿದ್ದರು. ಉಪನ್ಯಾಸಕ ಪ್ರಕಾಶ ಬಡಿಗೇರ ಸ್ವಾಗತಿಸಿದರು, ಶಿಕ್ಷಕ ಪ್ರಕಾಶ ಪೂಜೇರಿ ನಿರೂಪಿಸಿದರು ಹಾಗೂ ಕಾಳು ಬಡಿಗೇರ ವಂದಿಸಿದರು.