

ಮಂಗಳೂರು : ದೇಶದ ಪ್ರಥಮ ಪ್ರಜೆ, ಸಂವಿಧಾನದ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸಂಸತ್ತಿನ ಜಂಟಿ ಸದನ ಉದ್ದೇಶಿಸಿ ಮಾಡಿದ ಭಾಷಣವನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಪುವರ್ ಥಿಂಗ್ ಎಂದು ಉಲ್ಲೇಖಿಸಿ ಕೀಳು ಮಟ್ಟದ ಹೇಳಿಕೆ ನೀಡಿ ಸಂವಿಧಾನಕ್ಕೆ ಕಳಂಕವುಂಟು ಮಾಡಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದವರು ಹಾಗೂ ಅದರ ನೇತೃತ್ವ ವಹಿಸಿರುವ ನಾಯಕರು ದೇಶದ ಸಂವಿಧಾನ ವ್ಯವಸ್ಥೆಯನ್ನು ಸಾರ್ವಜನಿಕವಾಗಿ ಅವಮಾನಿಸುವುದು, ಘನತೆವೆತ್ತ ರಾಷ್ಟ್ರಾಧ್ಯಕ್ಷರನ್ನು ಅವಹೇಳನ ಮಾಡುವುದು ಹೊಸದೇನೆಲ್ಲ. ಇದು ಕಾಂಗ್ರೆಸ್‌ನವರ ಸಂಸ್ಕೃತಿಯಾಗಿ ಬಿಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.
ಬುಡಕಟ್ಟು ಸಮಾಜದಿಂದ ಬಂದು, ಅದರಲ್ಲಿಯೂ ಮಹಿಳೆಯಾಗಿ ದೇಶದ ಅತ್ಯುನ್ನತ ಸ್ಥಾನಕ್ಕೆ ಏರಿರುವ ದ್ರೌಪದಿ ಮುರ್ಮು ಅವರ ಸಾಧನೆಯನ್ನು ನಾವೆಲ್ಲ ಪ್ರಶಂಸಿಸಬೇಕು. ಸಂವಿಧಾನಿಕ ಪೀಠದ ಮೇರು ಸ್ಥಾನ ಅಲಂಕರಿಸಿರುವ ಅವರ ಬದುಕಿನ ಹಾದಿ ನಮಗೆಲ್ಲ ಒಂದು ಸ್ಫೂರ್ತಿ. ಹೀಗಿರುವಾಗ, ಸ್ವಂತ ಪರಿಶ್ರಮದಿಂದ ಬಂದು ಗೌರವಾನ್ವಿತ ಸ್ಥಾನದಲ್ಲಿ ಕುಳಿತು ಮಾಡಿದ ದ್ರೌಪದಿ ಮುರ್ಮು ಅವರ ಭಾಷಣವನ್ನು ಒಬ್ಬ ಮಹಿಳೆಯಾಗಿ ಸೋನಿಯಾ ಗಾಂಧಿ ಇಷ್ಟೊಂದು ತುಚ್ಛವಾಗಿ ಟೀಕಿಸುವ ಜತೆಗೆ ರಾಷ್ಟ್ರಪತಿಗಳಿಗೆ ಬಹಳ ಸುಸ್ತಾಗಿತ್ತು ಎಂದು ಹೇಳಿರುವುದು ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ನಾಯಕತ್ವದ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಕ್ಯಾ. ಚೌಟ ಹೇಳಿದ್ದಾರೆ.
ಬುಡಕಟ್ಟು ಸಮಾಜದ ಮಹಿಳೆಯೊಬ್ಬರು ದೇಶದ ಸರ್ವೋಚ್ಚ ಸ್ಥಾನಕ್ಕೆ ಏರಿರುವುದನ್ನು ಸಹಿಸದೆ ಬಹಳ ಅಸೂಯೆಯಿಂದ ಕಾಂಗ್ರೆಸ್ ನಾಯಕರು ಹಾಗೂ ಅದರ ಮಿತ್ರಪಕ್ಷದವರು ವ್ಯವಸ್ಥಿತ ರೀತಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪದೇಪದೇ ಅವಮಾನಿಸುವ ಪ್ರವೃತ್ತಿ ತೋರಿಸುತ್ತಿದ್ದಾರೆ ಎಂದು ಕ್ಯಾ. ಚೌಟ ಹೇಳಿಕೆಯಲ್ಲಿ ದೂರಿದ್ದಾರೆ.