

ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ಕಾಳಮ್ಮನಗರದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವೈ.ಪಿ.ಎಲ್ 4 ನೇ ಆವೃತ್ತಿಯಲ್ಲಿ ಎಂ.ಎನ್.ಎಸ್ ಬುಲ್ಸ್ ತಂಡ ಗೆಲುವು ಸಾಧಿಸಿದೆ.
ನಾಗರಾಜ ಕವಡಿಕೆರೆ ನೇತೃತ್ವದ ಎಂ.ಎನ್.ಎಸ್ ಬುಲ್ಸ್ ತಂಡ ಅಂತಿಮ ಪಂದ್ಯದಲ್ಲಿ ರಾಘು ಜಡ್ಡಿಪಾಲ ನೇತೃತ್ವದ ಆರ್.ಬಿ. ಟೈಗರ್ಸ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೆ ಏರಿತು.
ಪಂದ್ಯಾವಳಿಯಲ್ಲಿ ಉತ್ತಮ ಬೌಲರ್ ಆಗಿ ಎಂ.ಎನ್.ಎಸ್ ಬುಲ್ಸ್ನ ಮಣಿಕಂಠ ಪಟಗಾರ, ಉತ್ತಮ ಬ್ಯಾಟರ್ ಆಗಿ ಆರ್.ಬಿ ಟೈಗರ್ಸ್ನ ನಾಗರಾಜ ರಾಯ್ಕರ, ಉತ್ತಮ ಕ್ಷೇತ್ರರಕ್ಷಕರಾಗಿ ಎಂ.ಎನ್.ಎಸ್ ಬುಲ್ಸ್ ತಂಡದ ಚೇತು ಕಂಡೆಕರ, ಉತ್ತಮ ಕೀಪರ್ ಆಗಿ ಆರ್.ಬಿ. ಟೈಗರ್ಸ್ ತಂಡದ ಗುರು ಆಯ್ಕೆಯಾಗಿ ಪ್ರಶಸ್ತಿ ಪಡೆದರು. ಉತ್ತಮ ಕ್ಯಾಚ್ಗಾಗಿ ಎಸ್.ಜೆ. ರಾಕರ್ಸ್ ಪ್ರಸಾದ ವಿಶೇಷ ಬಹುಮಾನ ಪಡೆದರು. ಸರಣಿ ಪುರುಷೋತ್ತಮನಾಗಿ ಎಂ.ಎನ್.ಎಸ್ ಬುಲ್ಸ್ ನ ಶ್ರೀಷ ನಾಯಕ ಆಯ್ಕೆಯಾದರು.
ಪಂದ್ಯದ ನಂತರ ಉದ್ಯಮಿಗಳಾದ ಬಾಲಕೃಷ್ಣ ನಾಯಕ, ವಿಶಾಲ ಶಾನಭಾಗ, ನಂದನ ಬಾಳಗಿ ವಿಜೇತರಿಗೆ ಬಹುಮಾನ ವಿತರಿಸಿದರು. ಪಂದ್ಯಾವಳಿಗೆ ಸಹಕರಿಸಿದವರನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕ ಸಂತೋಷ ಕೊಳಗೇರಿ, ವೀಕ್ಷಕ ವಿವರಣೆಗಾರ ಇಬ್ರಾಹಿಂ, ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ ನಾಯಕ, ಮಾರುತಿ ನಾಯ್ಕ, ಪತ್ರಕರ್ತ ನಾಗರಾಜ ಮದ್ಗುಣಿ ಇತರರಿದ್ದರು. ಶಿಕ್ಷಕ ಚಂದ್ರಹಾಸ ನಾಯ್ಕ ನಿರ್ವಹಿಸಿದರು.