

ರಾಚಯ್ಯ ಸ್ವಾಮಿ ಮಾಚನೂರು
ರಾಯಚೂರು ಮನರೇಗಾ ಯೋಜನೆಯಡಿ ಹೊರಗುತ್ತಿಗೆ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯಾಧ್ಯಂತ 3000ಕ್ಕೂ ಅಧಿಕ ನೌಕರರರಿಗೆ ಕಳೆದ 4 ತಿಂಗಳಿನಿಂದ ವೇತನ ಇಲ್ಲದೆ ಕುಟುಂಬ ಫೋಷಣೆಗೆ ಸಂಕಷ್ಟ ಎದುರಾಗಿದ್ದು, ಇದರಿಂದ ನೌಕರರರು ವೇತನ ಪಾವತಿ ಮಾಡುವಂತೆ ವಿವಿಧ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿಗಳಿಗೆ ಸರ್ಕಾರಕ್ಕೆ ಒತ್ತಾಯ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಜಿಲ್ಲೆಯ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಈ ಮೊದಲು ಮನರೇಗಾ ಆರ್‌ಇಎಟಿ ಮಾಡ್ಯೂಲ್ ಮುಖಾಂತರ ಆಡಳಿತಾತ್ಮಕ ವೆಚ್ಚದಲ್ಲಿ ವೇತನ ಪಾವತಿಯಾಗುತ್ತಿತ್ತು. ಆದರೆ, ಈಗ ಕೆ2 ಪಿಎಫ್‌ಎಂಎಸ್ ತಂತ್ರಾಂಶದ ಮೂಲಕ ಎಸ್‌ಎನ್-ಸ್ಪಶ್ ಮಾಡ್ಯೂಲ್ ಮೂಲಕ ವೇತನ ಪಾವತಿಗೆ ಕೇಂದ್ರ ಸರ್ಕಾರ ಸೂಚಿಸಿದ್ದರಿಂದ ಸಾಫ್ಟ್‌ವೇರ್ ಸಮಸ್ಯೆಯಿಂದ ನೌಕರರಿಗೆ ವೇತನವೇ ಆಗುತ್ತಿಲ್ಲ. ಈ ಸಾಫ್ಟ್‌ವೇರ್ ನಿರ್ವಹಣೆಯಲ್ಲೇ ಅಧಿಕಾರಿಗಳು ನಾಲ್ಕು ತಿಂಗಳು ಕಾಲ ಕಳೆಯುತ್ತಿದ್ದಾರೆ. ಆದರೆ, ನೌಕರರಿಗೆ ವೇತನ ಪಾವತಿಸಲು ಪರ್ಯಾಯ ಮಾರ್ಗ ಮಾಡಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಎಷ್ಟು ಜನ ನೌಕರರು
ಮನರೇಗಾ ಕ್ಷೇಮಾಭಿವೃದ್ದಿ ಸಂಘದ ಅಧೀನದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯಾಧ್ಯಂತ 3000ಕ್ಕೂ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ರಾಯಚೂರು ಜಿಲ್ಲೆಯಲ್ಲಿಯೇ 107 ಜನ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ದೇವದುರ್ಗ 19, ಲಿಂಗಸೂಗೂರು 14, ಮಾನ್ವಿ 14, ಮಸ್ಕಿ 14, ಸಿಂಧನೂರು 15, ರಾಯಚೂರು ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕಚೇರಿಯಲ್ಲಿ 31 ಜನರು ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ತಿಂಗಳ್ಲಿ ಜಿಲ್ಲೆಯಲ್ಲಿ ಒಟ್ಟು 1.48 ಕೋಟಿ ರೂ. ವೇತನ ಸರ್ಕಾರ ನೀಡಬೇಕಾಗಿದೆ.
ಯಾವ ಹಂತದಲ್ಲಿ ನೌಕರರ ಕೆಲಸ
ಮನರೇಗಾ ಯೋಜನೆಯನ್ನು ಮುಖ್ಯ ಅಂತದಲ್ಲಿ ಕಾರ್ಯ ನಿರ್ವಹಣೆ ಮಾಡುವ ಕೆಲಸ ಸಿಬ್ಬಂದಿಗಳಿಗಿದ್ದು, ಇವರು ಜಿಲ್ಲಾ ಹಂತದಲ್ಲಿ ಎಡಿಪಿಸಿ, ಜಿಲ್ಲಾ ಐಇಸಿ ಸಂಯೋಜಕರು, ಡಿಎಂಐಎಸ್, ಜಿಲ್ಲಾ ಅಕೌಂಟ್ ಮ್ಯಾನೇಜರ್, ಡಿಇಒ ಹಾಗೂ ತಾಲೂಕು ಹಂತದಲ್ಲಿ ತಾಂತ್ರಿಕ ಸಂಯೋಜಕರು, ಅನುಷ್ಠಾನ ಇಲಾಖೆ ತಾಂತ್ರಿಕ ಸಂಯೋಜಕರು, ತಾಲೂಕು ಎಂಐಎಸ್, ತಾಲೂಕು ಐಇಸಿ ಸಂಯೋಜಕರು, ಆಡಳಿತ ಸಹಾಯಕರು, ಡಿಇಒ, ತಾಂತ್ರಿಕ ಸಹಾಯಕರು (ಸಿವಿಲ್, ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ) ವಿಭಾಗ ಸೇರಿ ಕೆಲ ಹುದ್ದೆಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಮಗಾರಿ ಭೇಟಿಗೂ ದುಡ್ಡಿಲ್ಲ
ಪ್ರತಿ ತಿಂಗಳ ಸಂಬಳವನ್ನೇ ನೌಕರರು ನೆಚ್ಚಿಕೊಂಡಿದ್ದಾರೆ. ಅದರಲ್ಲೂ ಮನರೇಗಾದಲ್ಲಿ ದುಡಿಯುವವರು ವಿವಿಧೆಡೆ ನರೇಗಾದಿಂದ ನಡೆಯುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಬೇಕಾಗಿರುತ್ತದೆ. ಕೂಲಿಕಾರರಿಗೆ ಕೆಲಸ ನೀಡಲು ಕ್ಷೇತ್ರ ಭೇಟಿಗೆ, ಇಲಾಖೆ ಅಧಿಕಾರಿಗಳು ಸಭೆ ನಡೆಸಿದರೆ ಸಭೆಗೆ ಹಾಜರಾಗಬೇಕು. ಆದರೆ ಸಂಬಳ ಇಲ್ಲದೆ ಇರುವುದರಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಸಾಲ ಮಾಡಿ ಕಾಮಗಾರಿ ಸ್ಥಳಗಳಿಗೆ ಭೇಟಿ ಮಾಡುತ್ತಿದ್ದಾರೆ.
ವಿವಿಧ ಜಿಲ್ಲೆಯಲ್ಲಿ ಪ್ರತಿಭಟನೆ
ಮನರೇಗಾ ಯೋಜನೆಯಡಿ ಹೊರಗುತ್ತಿಗೆ ನೌಕರರು ನಾಲ್ಕು ತಿಂಗಳ ವೇತನ ಪಾವತಿ ಮಾಡುವಂತೆ ಒತ್ತಾಯಿಸಿ ಮನರೇಗಾ ಕ್ಷೇಮಾಭಿವೃದ್ದಿ ಸಂಘದ ಅಧೀನದಲ್ಲಿ ಹೋರಾಟಗಳನ್ನು ಮಾಡುತ್ತಿದ್ದು, ರಾಮನಗರ,ಗದಗ,ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಈಗಾಗಲೇ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಮನರೇಗಾ ಯೋಜನೆಯಡಿ ಹೊರಗುತ್ತಿಗೆ ನೌಕರರ ವೇತನ ಸಮಸ್ಯೆ ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲದೆ ರಾಜ್ಯಾಧ್ಯಂತ ಸಮಸ್ಯೆ ಇದೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನುದಾನ ಬರಲಿದೆ. ತಾಂತ್ರಿಕ ಸಮಸ್ಯೆಯಿಂದ ಸಂಬಳವಾಗಿಲ್ಲ ಶೀಘ್ರದಲ್ಲಿ ಸಮಸ್ಯೆ ಬಗೆಹರಿಯಲಿದೆ. ಈ ಕುರಿತು ನಾನು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವೆ. ರಾಹುಲ್ ತುಕಾರಾಂ ಪಾಂಡ್ವೆ ಸಿಇಓ ಜಿಪಂ ರಾಯಚೂರು