

ಮಂಗಳೂರು : ಮಂಗಳೂರು-ಬೆಂಗಳೂರು ನಡುವೆ ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರಯಾಣಿಸುವ ಬಹು ನಿರೀಕ್ಷಿತ ಹೈಸ್ಪೀಡ್ ಎಕ್ಸ್‌ಪ್ರೆಸ್ ಕಾರಿಡಾರ್ ಯೋಜನೆ ಕಾರ್ಯಗತವಾಗುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ. ಹೆದ್ದಾರಿ ಸಚಿವಾಲಯದಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಕಾರಿಡಾರ್ ರಸ್ತೆ ನಿರ್ಮಾಣದ ಬಗ್ಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಂದ ಪತ್ರ ಬಂದಿದ್ದು, ಡಿಪಿಆರ್ ಸಿದ್ಧಪಡಿಸುವುದಕ್ಕೆ ಏ.30ರಂದು ಗುತ್ತಿಗೆ ನೀಡಲಾಗಿದೆ. ಈ ಪ್ರಕ್ರಿಯೆ ಪೂರ್ಣವಾಗಲು 18 ತಿಂಗಳು ಅವಧಿ ನಿರೀಕ್ಷಿಸಲಾಗಿದೆ. ದ.ಕ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಈ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ಮಹತ್ವದ ಹೆಜ್ಜೆ ಇರಿಸಿರುವ ಮೋದಿ ನೇತ್ರತ್ವದ ಕೇಂದ್ರ ಸರ್ಕಾರ ಹಾಗೂ ಹೆದ್ದಾರಿ ಸಚಿವ ಗಡ್ಕರಿ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಸಂಸದರು ತಿಳಿಸಿದ್ದಾರೆ.
ಈ ಹೈಸ್ಪೀಡ್ ಎಕ್ಸ್‌ಪ್ರೆಸ್ ಹೆದ್ದಾರಿಯು ನಾಲ್ಕರಿಂದ ಎಂಟು ಪಥಗಳನ್ನು ಹೊಂದುವ ನಿರೀಕ್ಷೆಯಿದ್ದು, ಹಾಸನದ ಮೂಲಕ ಹಾದು ಹೋಗಲಿದೆ. ಈ ಹೆದ್ದಾರಿಯಿಂದ ಎರಡು ಮಹಾನಗರಗಳ ನಡುವಿನ ಸಾರಿಗೆ ಮೂಲಸೌಕರ್ಯ ಮತ್ತಷ್ಟು ಮೇಲ್ದರ್ಜೆಗೇರಲಿದೆ. ಸಂಚಾರ ದಟ್ಟಣೆ ಹಾಗೂ ಪ್ರಯಾಣದ ಸಮಯ ಕಡಿಮೆಯಾಗಲಿದೆ. ಈ ಯೋಜನೆಯಿಂದ ಮಂಗಳೂರು ಮಾತ್ರವಲ್ಲದೇ ದಕ್ಷಿಣ ಕರ್ನಾಟಕಕ್ಕೆ ಹಾಗೂ ಸುತ್ತಮುತ್ತದ ನಗರಗಳ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಮಂಗಳೂರು ಬಂದರು ಹಾಗೂ ಪ್ರವಾಸೋದ್ಯಮ, ವ್ಯಾಪಾರ , ವಾಣಿಜ್ಯ ಚಟುವಟಿಕೆಗಳ ಬೆಳವಣಿಗೆಗೂ ಇನ್ನಷ್ಟು ಅನುಕೂಲವಾಗಲಿದೆ ಎಂದು ಕ್ಯಾ. ಚೌಟ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು-ಮಂಗಳೂರು ಹೈ ಸ್ಪೀಡ್ ಕಾರಿಡಾರ್ ಸಂಬಂಧಿಸಿ ಯೋಜನೆ ಜಾರಿ ಸಂಬಂಧ ಕಳೆದೊಂದು ವರ್ಷದಿಂದ ನಿರಂತರ ಶ್ರಮ ವಹಿಸಲಾಗಿದೆ. ಯೋಜನೆಯ ಎಲ್ಲ ಹಂತದ ಪ್ರಕ್ರಿಯೆಗಳು ನಿರೀಕ್ಷೆಯಂತೆ ಪೂರ್ಣಗೊಂಡರೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿಯು ಶೀಘ್ರ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಸಂಸದರು ತಿಳಿಸಿದ್ದಾರೆ.