

ಸರಗೂರು: ವಾಲಿಬಾಲ್ ಪಂದ್ಯಾವಳಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ತಾಲೂಕಿನ ತುಂಬಸೋಗೆ ಗ್ರಾಮದ ಎಂಎಂಕೆ ಕಾಲೇಜಿನ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎಂಎಂಕೆ ಕಾಲೇಜು ಪ್ರಾಂಶುಪಾಲ ಪ್ರಕಾಶ್ ಮಾತನಾಡಿ, ಹುಣಸೂರಿನ ಟ್ಯಾಲೆಂಟ್ ಕಾಲೇಜಿನ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಬಾಲಕಿಯರ ವಿಭಾಗದಲ್ಲಿ ಎಚ್.ಡಿ.ಕೋಟೆ ತಾಲೂಕಿನ ತುಂಬಸೋಗೆ ಎಂ.ಎಂ.ಕೆ. ಕಾಲೇಜು ತಂಡ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.
ಈ ಕಾಲೇಜಿನ ವಿದ್ಯಾರ್ಥಿನಿಯರು ಮೊದಲಿಗೆ ಕೆ .ಆರ್ ನಗರ ಮತ್ತು ಮೈಸೂರಿನ ಟೆರೆಷಿಯನ್ ಕಾಲೇಜು ತಂಡದ ವಿರುದ್ಧ ಜಯಗಳಿಸಿ ಫೈನಲ್‌ನಲ್ಲಿ ಹುಣಸೂರಿನ ಶಾಸ್ತ್ರಿ ಕಾಲೇಜಿನ ತಂಡವನ್ನು 2-0 ಅಂತರದಿಂದ ಮಣಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆಯಲ್ಲಿ 200ಕ್ಕೂ ಹೆಚ್ಚು ಪಿಯು ಕಾಲೇಜುಗಳಿದ್ದು, ಗ್ರಾಮೀಣ ಭಾಗದ ಎಂ.ಎಂ.ಕೆ ಕಾಲೇಜಿನ ವಿದ್ಯಾರ್ಥಿನಿಯರು ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಶ್ಲಾಘನೀಯ. ರಾಜ್ಯಮಟ್ಟಕ್ಕೆ ಬೇಕಾದ ಎಲ್ಲ ರೀತಿಯ ತರಬೇತಿಯನ್ನು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತದೆ ಎಂದು ತಿಳಿಸಿದರು.
ವಿಜೇತರಾದ ತಂಡದ ಎಲ್ಲರೂ ಗ್ರಾಮೀಣ ವಿದ್ಯಾರ್ಥಿಗಳಾಗಿದ್ದು, ಇವರಿಗೆ ಪ್ರೋತ್ಸಾಹ ನೀಡಿದ ಪಾಲಕರನ್ನೂ ಎಂಎಂಕೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ.ಆರ್. ಸತೀಶ್, ನಿರ್ದೇಶಕ ಎಸ್.ಪಿ.ಪವನ್, ಸಿಡಿಸಿ ಸದಸ್ಯರಾದ ಸಕಲೇಶ್ ಮೋಹನ್ ಶ್ರೀನಿವಾಸ್ ಉಪನ್ಯಾಸಕರಾದ ಜಾನ್ ವಿರೂಪಾಕ್ಷ, ಮನೋಜ್, ಮೋಹನ್, ಪ್ರಸನ್ನ, ಸಿದ್ಧಾರ್ಥ, ಸಿದ್ದರಾಜು, ಮಹಾದೇವಿ. ತನುಜಾ, ಸುಪ್ರಿಯಾ, ಮುಸ್ಕಾನ್ ಮೊದಲಾದವರು ಹಾಜರಿದ್ದರು