ಸುಪ್ರೀಂ ಆದೇಶದನ್ವಯ ರಾಜ್ಯದಲ್ಲಿ ತಕ್ಷಣ ಒಳಮೀಸಲಾತಿ ಜಾರಿಗೊಳಿಸಿ

madiga
Published on

ಬೆಂಗಳೂರು: ರಾಜ್ಯ ಸರ್ಕಾರವೂ ಕುಂಟುನೆಪ ಹೇಳದೆ ಸುಪ್ರೀಂಕೋರ್ಟ್​ ಆದೇಶವನ್ನು ಪಾಲನೆ ಮಾಡುವ ಮೂಲಕ ತಕ್ಷಣ ಒಳಮೀಸಲಾತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ ಎಡಗೈ ಸಮುದಾಯದ ಸಂಘಟನೆಗಳು, ಸೋಮವಾರ (ಅ.28) ನಡೆಯಲಿರುವ ಸಚಿವ ಸಂಪುಟ ಸಭೆಯ ನಿಲುವು ಆಧಾರಿಸಿ ಮುಂದಿನ ಹೋರಾಟದ ರೂಪುರೇಷ ಸಿದ್ಧಪಡಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ಕೊಟ್ಟಿವೆ.

ವಿವಿಧ ಸಂಟನೆಗಳ ಸಹಯೋಗದಲ್ಲಿ ಮೂಲ ಮಾದಿಗ ಮೂವ್ಮೆಂಟ್​ ಹಾಗೂ ಒಳಮೀಸಲಾತಿ ಹೋರಾಟ ರೂವಾರಿ ಸಿ.ಕೆ.ಜಯರಾಮ್​ ವೇದಿಕೆ ಜಂಟಿಯಾಗಿ ಭಾನುವಾರ ವಸಂತನಗರದ ಲಿಡ್ಕರ್​ ಭವನದಲ್ಲಿ "ಒಳಮೀಸಲಾತಿ@30 ಮುಂದಿನ ಸವಾಲುಗಳು' ಕುರಿತು ಕಾರ್ಯಕ್ರಮದಲ್ಲಿ ಒಳಮೀಸಲಾತಿ ಜಾರಿಗೆ ಬಂದ ಬಳಿಕವಷ್ಟೇ ಕೆಎಎಸ್​ ಸೇರಿ ಸರ್ಕಾರಿ ಇಲಾಖೆಗಳ ಬ್ಯಾಕ್​ಲ್ಯಾಗ್​ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ನೇಮಕಾತಿ ಪ್ರಕ್ರಿಯೆ ನಡೆಸಕೂಡದು. ಈಗಿರುವ ಅಂಕಿ ಅಂಶ ಆಧಾರದಡಿ ಒಳಮೀಸಲಾತಿ ಜಾರಿಗೊಳಿಸಬೇಕೆಂದು 10ಕ್ಕೂ ಅಧಿಕ ಸಂಘಟನೆಗಳ ಪದಾಧಿಕಾರಿಗಳು ಸರ್ಕಾರಕ್ಕೆ ಆಗ್ರಹಿಸಿದರು.

ಮಾಜಿ ಸಂಸದ ಎಲ್​.ಹನುಮಂತಯ್ಯ ಮಾತನಾಡಿ, ಅಂಕಿ ಅಂಶಗಳು ಸರಿಯಾಗಿಲ್ಲವೆಂದು ಒಳಮೀಸಲಾತಿ ವಿರೋಧಿಗಳು ಹೇಳುತ್ತಿರುವುದು ಸರಿಯಲ್ಲ. ಹಿಂದೆ ಹಾವನೂರು ಆಯೋಗ, ಚಿನ್ನಪ್ಪರೆಡ್ಡಿ ವರದಿ, ಮಂಡಲಕಮಿಷನ್​ನ ವರದಿಗಳನ್ನು ಜಾರಿ ಮಾಡುವಾಗಲೂ ನಿಖರ ಅಂಕಿ ಅಂಶಗಳು ಇರಲ್ಲಿಲ್ಲ. ಆದರೂ, ಇವುಗಳನ್ನು ಅನುಷ್ಠಾನಕ್ಕೆ ತರಲಾಗಿತ್ತು. ಅದೇರೀತಿ, ಈಗಿರುವ ಅಂಕಿ ಅಂಶದ ಆಧಾರಡಿ ಒಳಮೀಸಲಾತಿ ಜಾರಿಗೊಳಿಸಿ ದತ್ತಾಂಶ ಪರಿಶೀಲಿಸಬೇಕು. ಮೀಸಲಾತಿಯಲ್ಲಿ ಯಶಸ್ಸು ಕಾಣಲು ಮಾದಿಗ ಸಮುದಾಯದ ಎಲ್ಲ ಸಂಘ, ಸಂಸ್ಥೆಗಳು ಒಕ್ಕೊರಲಿನಿಂದ ಹೋರಾಡಬೇಕೆಂದು ಕರೆ ನೀಡಿದರು.

ಸಚಿವ ಸಂಪುಟದಲ್ಲಿ ಒಳ ಮೀಸಲಾತಿ ಕುರಿತು ಸರ್ಕಾರ ನಿರ್ಧಾರ ತೆಗೆದುಕೊಳ್ಳದಿದ್ದರೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್​ ವಿರುದ್ಧ ಮತ ಚಲಾಯಿಸುವುದೂ ಸೇರಿ ಹಲವು ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು. ಶ್ರೀ ಮುರುಳಸಿದ್ದೇಶ್ವರ ಪುಣ್ಯಾ ಆಶ್ರಮ ಪೀಠದ ಶಿವಶರಣ ಶ್ರೀ ಗದ್ದಿಗೆಪ್ಪ ಅಜ್ಜ, ಕರ್ನಾಟಕ ಮಾದಿಗ ದಂಡೋರ ಅಧ್ಯಕ್ಷ ಶಂಕರಪ್ಪ, ಮೂಲ ಮಾದಿಗ ಮೂವ್ಮೆಂಟ್​ ಅಧ್ಯಕ್ಷ ಜೆ.ಸಿ.ಪ್ರಕಾಶ್​, ನಿವೃತ್ತ ಐಎಎಸ್​ ಅಧಿಕಾರಿರಾದ ತೇಗನೂರು, ಗೋನಾಳ್​ ಭೀಮಪ್ಪ, ಬಾಬುರಾವ್​ ಮುಡಬಿ, ಎಚ್​.ಆರ್​.ಭೀಮಾಶಂಕರ್​ ಸೇರಿ ಮಾದಿಗ ಸಮುದಾಯದ ಹಲವು ನಾಯಕರು ಉಪಸ್ಥಿತರಿದ್ದರು.

ಒಗ್ಗಟ್ಟುಯಿಂದ ಹೋರಾಡೋಣ

ಒಳಮೀಸಲಾತಿ ಜಾರಿಗೆ ನಾವೆಲ್ಲರೂ ಒಟ್ಟಾಗಿ ಹೋರಾಟ ನಡೆಸುವ ಅಗತ್ಯವಿದೆ. ಎಲ್ಲ ಪಕ್ಷಗಳು ನಮ್ಮ ಮತ ಪಡೆಯಲು ಒಡೆದು ಆಳುವ ನೀತಿ ಅನುಸರಿಸುತ್ತಿವೆ. ಈ ಬಾರಿ ಅದಕ್ಕೆ ಅಸ್ಪದ ನೀಡಬಾರದು. ಮೀಸಲಾತಿ ವಿರೋಧಿಸುವ ಶಾಸಕರು, ಸಚಿವರು, ಮುಖಂಡರು, ನಾಯಕರ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿ ಬುದ್ಧಿ ಕಲಿಸಬೇಕಿದೆ. ಪಕ್ಷಗಳ ವಿರುದ್ಧ ಮತ ಚಲಾಯಿಸಿ, ಶಕ್ತಿ ಪ್ರದರ್ಶಿಸಬೇಕು ಎಂದು ನಿವೃತ್ತ ಐಎಎಸ್​ ಅಧಿಕಾರಿ ಅನಿಲ್​ಕುಮಾರ್​ ಹೇಳಿದರು.

ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನಡೆಸಿದ್ದ ಸಮೀಕ್ಷೆ ವರದಿ ವೈಜ್ಞಾನಿಕವಾಗಿದೆ. ಆದರೆ, ಒಳಮೀಸಲಾತಿ ವಿರೋಧಿಗಳು ಅದನ್ನು ಅವೈಜ್ಞಾನಿಕ ಎಂದು ಸುಳ್ಳು ಹೇಳುತ್ತಿದ್ದಾರೆ. ಸದಾಶಿವ ವರದಿಯಲ್ಲಿ ಲೋಪ ದೋಷಗಳಾಗಿವೆ ಎನ್ನುವಂತಹ ಊಹಾಪೋಹಗಳಿಗೆ ಸರ್ಕಾರ ಕಿವಿಗೊಡಬಾರದು.

| ಡಾ.ಎನ್​. ಮೂರ್ತಿ. ಆರ್​ಪಿಐ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net