ಆ.21ರಂದು ಉಚಿತ ಸಾಮೂಹಿಕ ವಿವಾಹ

24rajesh5
Published on

ಚಾಮರಾಜನಗರ: ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಸೋಮವಾರ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಧಿಕಾರದ ಸಭೆಯಲ್ಲಿ ಆ.21ರಂದು ಪ್ರತಿ ವರ್ಷ ಪ್ರಾಧಿಕಾರ ವತಿಯಿಂದ ನಡೆಯುವ ಉಚಿತ ಸಾಮೂಹಿಕ ವಿವಾಹ ಕುರಿತು ವಿವರವಾಗಿ ಚರ್ಚಿಸಲಾಯಿತು. ಪ್ರಾಧಿಕಾರದ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಹೊಸದಾಗಿ ಕಾಮಗಾರಿ ನಿರ್ವಹಣೆ ಸಂಬಂಧ ವಿಸ್ತೃತ ಚರ್ಚೆ ನಡೆಯಿತು. ಸಂಪರ್ಕ ರಸ್ತೆ, ಮಲೆ ಮಹದೇಶ್ವರಬೆಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಶಾಲೆಗಳಿಗೆ ಪ್ರಾಧಿಕಾರದಿಂದ ಮೂಲಸೌಕರ್ಯ, ವಿವಿಧ ಹಕ್ಕು ಬಾಧ್ಯತೆ, ಮುಡಿ ಕಾಣಿಕೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ದಾಸೋಹ, ಲಾಡು, ಪೂಜಾ ವಿಭಾಗಕ್ಕೆ ಬೇಕಾದ ಪಡಿತರ ಸಾಮಗ್ರಿಗಳ ಸರಬರಾಜು, ವಾಹನ ಪ್ರವೇಶ ಶುಲ್ಕ, ಮಹದೇಶ್ವರಸ್ವಾಮಿ ಕ್ಷೇತ್ರವನ್ನು ಪ್ಲಾಸ್ಟಿಕ್‌ಮುಕ್ತ ಪ್ರದೇಶವನ್ನಾಗಿ ಘೋಷಿಸುವ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ತಪಾಸಣಾ ಕೇಂದ್ರ ತೆರೆಯುವ ಕುರಿತು ಪ್ರಸ್ತಾಪಿಸಲಾಯಿತು.

ಪ್ರಾಧಿಕಾರಕ್ಕೆ ಸೇರಿದ ಮಾಸ್ಟರ್ ಪ್ಲಾೃನ್ ಆವರಣದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 512 ಕೊಠಡಿಗಳುಳ್ಳ ಕಟ್ಟಡ ನಿರ್ಮಾಣ ಕಾಮಗಾರಿ ಸಂಬಂಧ ಪ್ರಗತಿ ವಿವರ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು, ಆ.21ರಂದು ನಡೆಯಲಿರುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೂ ಮೊದಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದರು.

ಕ್ಷೇತ್ರದ ಕಾಮಗಾರಿ ಹಾಗೂ ಅಭಿವೃದ್ಧಿ ಕುರಿತು ಸೇರಿದಂತೆ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸಾಲೂರು ಮಠದ ಶ್ರೀಶಾಂತಮಲ್ಲಿಕಾರ್ಜುನಸ್ವಾಮಿ, ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಂ.ಆರ್.ಮಂಜುನಾಥ್, ಎಚ್.ಎಂ. ಗಣೇಶ್ ಪ್ರಸಾದ್, ಸಿ.ಎನ್.ಮಂಜೇಗೌಡ, ಡಾ.ಡಿ.ತಿಮ್ಮಯ್ಯ, ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಚೂಡಾ ಅಧ್ಯಕ್ಷರಾದ ಮಹಮ್ಮದ್ ಅಸ್ಗರ್ ಮುನ್ನಾ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಚ್.ವಿ. ಚಂದ್ರು, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು,ಪ್ರಾಧಿಕಾರದ ಕಾರ್ಯದರ್ಶಿ ಎ.ಇ. ರಘು ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net