ಇಂಡಿಗನತ್ತ, ಮೆಂದಾರೆ ಗ್ರಾಮಸ್ಥರಿಗೆ ಪಡಿತರ ವಿತರಣೆ

26 HANUR 7
Published on

ಮಹದೇಶ್ವರ ಬೆಟ್ಟ: ತಾಲೂಕಿನ ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಇಂಡಿಗನತ್ತ ಹಾಗೂ ಮೆಂದಾರೆ ಗ್ರಾಮದ ಜನರಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.

ಈ ವೇಳೆ ಮಹಾಸಭಾದ ಗೌರವಾಧ್ಯಕ್ಷ ಹರವೆ ಮಠದ ಶ್ರೀ ಸರ್ವಭೂಷಣ ಸ್ವಾಮೀಜಿ ಮಾತನಾಡಿ, ಆರಾಧ್ಯ ದೈವ ಶ್ರೀ ಮಹದೇಶ್ವರರನ್ನು ಪೂಜಿಸಿಕೊಂಡು ಬರುತ್ತಿರುವ ಇಲ್ಲಿನ ಜನರು ಹಲವು ದಶಕಗಳಿಂದ ವಾಸಿಸುತ್ತಿದ್ದು, ಸಮರ್ಪಕ ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಜನರು ಈ ಬಗ್ಗೆ ಹಲವು ವರ್ಷಗಳಿಂದಲೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಿಳಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತಾ ಗ್ರಾಮಸ್ಥರು ಲೋಕಸಭೆ ಚುನಾವಣೆ ಬಹಿಷ್ಕರಿಸಿದ್ದರು. ಈ ವೇಳೆ ಕಾನೂನಿನ ಅರಿವಿನ ಕೊರತೆಯಿಂದ ಆಕಸ್ಮಿಕವಾಗಿ ಘಟನೆ ನಡೆದಿರುವುದು ದುರದೃಷ್ಟಕರ. ಮೂಲ ಸೌಕರ್ಯ ಪಡೆಯಬೇಕಾದರೆ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಹೋರಾಟ ನಡೆಸಬೇಕು. ಆದರೆ ಕಾನೂನಿನ ವಿರುದ್ಧ ನಡೆದುಕೊಳ್ಳಬಾರದು ಆದ್ದರಿಂದ ಪ್ರತಿಯೊಬ್ಬರೂ ಮಕ್ಕಳನ್ನು ಸುಶಿಕ್ಷಿತರಾಗಿಸಬೇಕು. ಇದರಿಂದ ಪ್ರಾಪಂಚಿಕ ಜ್ಞಾನದ ಅರಿವು ಬೆಳೆಯುತ್ತದೆ ಎಂದು ತಿಳಿಸಿದರು.

ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಘಟನೆ ನಡೆದ ಬಳಿಕ ಗ್ರಾಮಸ್ಥರು ನ್ಯಾಯಾಂಗ ಬಂಧನದ ಹಿನ್ನ್ನೆಲೆ ಸಮಾಜದ ಮುಖಂಡರೆಲ್ಲರೂ ಸೇರಿ ವಕೀಲರ ಜತೆ ಚರ್ಚಿಸಿ ಈವರೆಗೂ ಗ್ರಾಮಸ್ಥರೊಂದಿಗೆ ಇದ್ದೇವೆ. ಈ ದೆಸೆಯಲ್ಲಿ ಗ್ರಾಮಸ್ಥರಿಗೆ ಆಹಾರ ಪದಾರ್ಥಗಳನ್ನು ವಿತರಿಸಬೇಕೆಂದು ತೀರ್ಮಾನಿಸಲಾಗಿತ್ತು. ಇದಕ್ಕೆ ಸ್ನೇಹಿತರು ಕೈ ಜೋಡಿಸಿದ್ದಾರೆ ಎಂದು ತಿಳಿಸಿದರು. ಮಹಾಸಭಾದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ಕಾರ್ಯದರ್ಶಿ ಪುಟ್ಟಣ್ಣ, ಉಪಾಧ್ಯಕ್ಷ ಪುಟ್ಟಣ್ಣ, ತಾಲೂಕು ಅಧ್ಯಕ್ಷ ಬಸವರಾಜಪ್ಪ, ಕಾರ್ಯದರ್ಶಿ ಆನಾಪುರ ಉಮೇಶ್, ಮುಖಂಡ ಪ್ರೀತನ್ ನಾಗಪ್ಪ, ಬೇಡಗಂಪಣ ಮುಖಂಡರಾದ ಪುಟ್ಟಣ್ಣ ಮಾಸ್ಟರ್, ಮುರುಗೇಶ್, ಪುರಾಣಿ ಮಹೇಶ್, ಬಸವರಾಜು, ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net