

ಹನೂರು: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಅಧಿಕ ನಾಗರ ಅಮಾವಾಸ್ಯೆ (ಭೀಮನ ಅಮಾವಾಸ್ಯೆ) ಅಂಗವಾಗಿ ಭಾನುವಾರ ಸಂಜೆ ಸ್ವಾಮಿಗೆ ಎಣ್ಣೆಮಜ್ಜನ ಸೇವೆ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ದೇಗುಲದಲ್ಲಿ ಸಂಜೆ 6.30 ರಿಂದ ರಾತ್ರಿ 8.30ರವರೆಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ಮಾದಪ್ಪನಿಗೆ ವಿವಿಧ ಅಭಿಷೇಕ ನೆರವೇರಿಸಿದರು. ಬಳಿಕ ಎಣ್ಣೆಮಜ್ಜನ ಸೇವೆ ನೆರವೇರಿಸಿ ಧೂಪ, ದೀಪದಾರತಿ ಹಾಗೂ ಮಹಾಮಂಗಳಾರತಿ ಬೆಳಗಿಸಲಾಯಿತು.
ಬೀಡು ಬಿಟ್ಟಿರುವ ಭಕ್ತರು: ಅಮಾವಾಸ್ಯೆ ಅಂಗವಾಗಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಹದೇಶ್ವರ ಬೆಟ್ಟದಲ್ಲಿ ಬೀಡು ಬಿಟ್ಟಿದ್ದಾರೆ. ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವುದರ ಮೂಲಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಉತ್ಸವ ಮೂರ್ತಿಗಳಿಗೆ ಧನ, ಧಾನ್ಯ ಇನ್ನಿತರ ವಸ್ತುಗಳನ್ನು ಎಸೆದು ದೇವರ ಕೃಪೆಗೆ ಪಾತ್ರರಾದರು. ಈ ವೇಳೆ ಉಘೇ ಮಾದಪ್ಪ ಉಘೇ… ಇತ್ಯಾದಿ ಘೋಷಣೆಗಳನ್ನು ಕೂಗಿ ಭಕ್ತಿಭಾವ ಮೆರೆದರು.
ಅಗತ್ಯ ಸಿದ್ಧತೆ
ಅಮಾವಾಸ್ಯೆ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಮ.ಬೆಟ್ಟಕ್ಕೆ ಆಗಮಿಸುವುದರಿಂದ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗ ‘ಶಕ್ತಿ ಯೋಜನೆ’ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭೇಟಿ ನೀಡುವುದರಿಂದ ವಿವಿಧ ಘಟಕಗಳಿಂದ 300 ಹೆಚ್ಚುವರಿ ಸರ್ಕಾರಿ ಬಸ್ ಸೌಕರ್ಯವನ್ನು ಒದಗಿಸಲಾಗಿದೆ.
ವಿಶೇಷ ಅಲಂಕರ: ಗರ್ಭಗುಡಿ ಹಾಗೂ ಮುಂಭಾಗವನ್ನು ವಿವಿಧ ಬಗೆಯ ತರಕಾರಿ, ಹಣ್ಣು ಹಾಗೂ ತೆಂಗಿನ ಕಾಯಿಗಳಿಂದ ಮಾಡಿದ್ದ ವಿಶೇಷ ಅಲಂಕಾರ ಭಕ್ತರನ್ನು ಆಕರ್ಷಿಸಿತು. ದೇಗುಲವನ್ನು ವಿವಿಧ ಪುಷ್ಪ, ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಕಾಲ್ನಡಿಗೆಯಲ್ಲಿ ಭಕ್ತರ ಆಗಮನ:
ಅಧಿಕ ನಾಗರ ಅಮಾವಾಸ್ಯೆ (ಭೀಮನ ಅಮಾವಾಸ್ಯೆ) ಅಂಗವಾಗಿ ಹರಕೆ ಹೊತ್ತ ಭಕ್ತರು ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ತೆರಳುತ್ತಿದ್ದಾರೆ. ಜು.17ರಂದು ಮ.ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಅಮಾವಾಸ್ಯೆ ವಿಶೇಷ ಪೂಜೆಗಳು ಜರುಗಲಿವೆ. ಈ ದಿಸೆಯಲ್ಲಿ ಮೈಸೂರು, ಚಾಮರಾಜನಗರ, ನಂಜನಗೂಡು, ಎಚ್.ಡಿ.ಕೋಟೆ ಇನ್ನಿತರ ಕಡೆಗಳ ಭಕ್ತರು ತಂಡೋಪತಂಡವಾಗಿ ಕೊಳ್ಳೇಗಾಲ - ಹನೂರು ಮಾರ್ಗವಾಗಿ ಕಳೆದ 2 ದಿನಗಳಿಂದ ಮ.ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾರೆ. ಮಾರ್ಗಮಧ್ಯೆ ಅಲ್ಲಲ್ಲಿ ಮರದ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತ, ಸಹ ಭೋಜನ ಸೇವಿಸಿ ತೆರಳುತ್ತಿರುವ ದೃಶ್ಯ ಹನೂರು ಭಾಗದಲ್ಲಿ ಕಂಡುಬರುತ್ತಿದೆ. ದೇವರಗುಡ್ಡರು ಕಂಸಾಳೆ ಬಾರಿಸುತ್ತ ಮಾದಪ್ಪನ ಮಹಿಮೆಯ ಹಾಡನ್ನು ಹಾಡುತ್ತ ಭಕ್ತಿಭಾವದಿಂದ ತೆರಳುತ್ತಿದ್ದಾರೆ. ಯುವಕರು ತಮಟೆ ಬಾರಿಸುತ್ತ ಅಲ್ಲಲ್ಲಿ ಕುಣಿದು ಕುಪ್ಪಳಿಸಿಕೊಂಡು ತೆರಳುತ್ತಿರುವ ದೃಶ್ಯ ಕಂಡುಬಂತು.