

ಹನೂರು: ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ದೇಗುಲದಲ್ಲಿ ಶುಕ್ರವಾರ ವಿಶೇಷ ಪೂಜೆ ನೆರವೇರಿಸುವ ಮೂಲಕ ಮಹಾಶಿವರಾತ್ರಿ ಜಾತ್ರೆಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಜಾತ್ರೆ ಅಂಗವಾಗಿ ದೇಗುಲ, ಗರ್ಭಗುಡಿ, ಸೇರಿದಂತೆ ಸುತ್ತಮುತ್ತಲಿನ ಆವರಣವನ್ನು ತಳಿರು- ತೋರಣಗಳಿಂದ ಸಿಂಗರಿಸಲಾಗಿತ್ತು. ಗೋಪುರವನ್ನು ವಿವಿಧ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಗಿನಜಾವ ಸ್ವಾಮಿಗೆ ಏಕವಾರ ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಪಂಚಾಮೃತ ಅಭಿಷೇಕ ನೆರವೇರಿಸಿ ಮಹಾ ಮಂಗಳಾರತಿ ಬೆಳಗಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಸಂಜೆ ಬೇಡಗಂಪಣ ಅರ್ಚಕರು ಸ್ವಾಮಿಯ ಉತ್ಸವ ಮೂರ್ತಿಯನ್ನು ಛತ್ರಿ, ಚಾಮರ ಹಾಗೂ ಮಂಗಳವಾದ್ಯದೊಂದಿಗೆ ಭಕ್ತರ ಸಮ್ಮುಖದಲ್ಲಿ ಮೆರವಣಿಗೆ ಮೂಲಕ ಸಾಲೂರು ಬೃಹನ್ಮಠಕ್ಕೆ ಕೊಂಡೊಯ್ದು ವಿಶೇಷ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಕೈಂಕರ್ಯವನ್ನು ನೆರವೇರಿಸಿದರು.
ಪಾದಯಾತ್ರಿಗಳಿಗೆ ನೇರ ದರ್ಶನ:
ಮ.ಬೆಟ್ಟಕ್ಕೆ ಆಗಮಿಸಿದ ಭಕ್ತರು ಅಂತರಗಂಗೆಯಲ್ಲಿ ಪುಣ್ಯಸ್ನಾನ ಮಾಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುವುದು ವಾಡಿಕೆ. ಹಾಗಾಗಿ ಇದೀಗ ಹೊಸದಾಗಿ ನಿರ್ಮಾಣಗೊಂಡಿರುವ ಕಲ್ಯಾಣಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಿ ದೇಗುಲದ ಮುಂಭಾಗ ಧೂಪ ಹಾಕಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಸ್ವಾಮಿಯ ನೇರ ದರ್ಶನಕ್ಕೆ 500 ರೂ. ಟಿಕೆಟ್‌ನ ವಿಶೇಷ ಕೌಂಟರ್ ತೆರೆಯಲಾಗಿತ್ತು. ಕಾಲ್ನಡಿಗೆ ಮೂಲಕ ಆಗಮಿಸಿದ ಭಕ್ತರಿಗೆ ನೇರವಾಗಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಉತ್ಸವದಲ್ಲಿ ಭಾಗಿಯಾದ ಭಕ್ತರು:
ಈಗಾಗಲೇ ಮ.ಬೆಟ್ಟದಲ್ಲಿ ಲಕ್ಷಾಂತರ ಭಕ್ತರು ಬೀಡು ಬಿಟ್ಟಿದ್ದು, ಇದರಲ್ಲಿ ಹರಕೆ ಹೊತ್ತ ಭಕ್ತರು ಶುಕ್ರವಾರ ಹುಲಿವಾಹನ, ರುದ್ರಾಕ್ಷಿವಾಹನ ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವುದರ ಮೂಲಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಭಕ್ತರು ಧನ, ಧಾನ್ಯ ಇನ್ನಿತರ ವಸ್ತುಗಳನ್ನು ಎಸೆಯುವುದರ ಮೂಲಕ ದಂಡಿನ ಕೋಲನ್ನು ಹೊತ್ತು ದೇವರ ಕೃಪೆಗೆ ಪಾತ್ರರಾದರು.
ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಭಕ್ತಿಯ ಪರಾಕಾಷ್ಠೆ ಮೆರೆದರು. ಹರಕೆಹೊತ್ತ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆ ಕೈಗೊಳ್ಳುವುದರ ಮೂಲಕ ತಮ್ಮ ಹರಕೆ ತೀರಿಸಿದರು. ವಿವಿಧ ಉತ್ಸವ ಹಾಗೂ ಸೇವೆಗಳಲ್ಲಿ ಭಾಗಿಯಾಗಿದ್ದರು.
ಎಲ್ಲೆಂದರಲ್ಲಿ ಜನವೊ ಜನ! :
ಈಗಾಗಲೇ ತಮಿಳುನಾಡು ಸೇರಿದಂತೆ ಬೆಂಗಳೂರು, ರಾಮನಗರ, ಚನ್ನಪಟ್ಟಣ, ದೊಡ್ಡಬಳ್ಳಾಪುರ, ಬಿಡದಿ, ಕನಕಪುರ, ಮದ್ದೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿ ಮ.ಬೆಟ್ಟದಲ್ಲಿ ಬೀಡು ಬಿಟ್ಟಿದ್ದಾರೆ. ವಸತಿ ನಿಲಯಗಳೆಲ್ಲವೂ ಭರ್ತಿಯಾಗಿದ್ದು, ಭಕ್ತರು ರಂಗಮಂದಿರ, ದೇಗುಲದ ಸಮೀಪ ನೆರಳಿನ ವ್ಯವಸ್ಥೆ ಕಲ್ಪಿಸಿರುವ ಶಾಮಿಯಾನದ ಬಳಿ, ಮಹದೇಶ್ವರ ಶಾಲೆ ಆವರಣ ಇನ್ನಿತರ ಕಡೆಗಳಲ್ಲಿ ಬೀಡು ಬಿಟ್ಟಿದ್ದಾರೆ. ಭಕ್ತರಿಗೆ ಪ್ರಾಕಾರದ ವತಿಯಿಂದ ನಿರಂತರ ದಾಸೋಹ ವ್ಯವಸ್ಥೆ, ಕುಡಿಯುವ ನೀರು, ನೆರಳು, ಪಾರ್ಕಿಂಗ್ ವ್ಯವಸ್ಥೆ, ಪೋಲಿಸ್ ಬಂದೋಬಸ್ತ್ ಕಲ್ಪಿಸಿದೆ. ದಾನಿಗಳು ಅಲ್ಲಲ್ಲಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು.
ಶಿವರಾತ್ರಿ ಅಂಗವಾಗಿ ಗರ್ಭಗುಡಿ ಹಾಗೂ ಒಳಾಂಗಣವನ್ನು ವಿವಿಧ ಬಗೆಯ ಹಣ್ಣು, ತರಕಾರಿ ಹಾಗೂ ಹೊರಾಂಗಣವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸುವ ಕಾರ್ಯವನ್ನು ಶುಕ್ರವಾರ ಪ್ರಾರಂಭಿಸಲಾಯಿತು.
5 ಲಕ್ಷ ಲಾಡು ತಯಾರಿಕೆ:
ಮ.ಬೆಟ್ಟಕ್ಕೆ ಆಗಮಿಸುವ ಬಹುತೇಕ ಭಕ್ತರಿಂದ ಲಾಡಿಗೆ ಹೆಚ್ಚಿನ ಬೇಡಿಕೆ ಇದೆ. ಪ್ರಾಕಾರ ಬೇಡಿಕೆಗೆ ಅನುಗುಣವಾಗಿ ಪ್ರತಿದಿನ 42 ಸಾವಿರ ಲಾಡನ್ನು ತಯಾರಿಸುತ್ತಿದೆ. ಈಗಾಗಲೇ 2 ಲಕ್ಷ ಲಾಡು ಮಾರಾಟವಾಗಿದೆ. ಇನ್ನು 3 ಲಕ್ಷ ಲಾಡು ದಾಸ್ತಾನಾಗಿದ್ದು, ತಯಾರಿಕೆ ನಡೆಯುತ್ತಲೇ ಇದೆ ಎಂದು ಪ್ರಾಕಾರದ ಉಪ ಕಾರ್ಯದರ್ಶಿ ಬಸವರಾಜು ವಿಜಯವಾಣಿಗೆ ತಿಳಿಸಿದರು.