ಕಾಮಗಾರಿ ಅವೈಜ್ಞಾನಿಕವಾಗಿದ್ದರೂ ಟೋಲ್

SASTHAN TOLLGATE
Published on

 ಮಳವಳ್ಳಿ : ತಾಲೂಕಿನ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ನಡೆಸಿದೆ. ಗುಣಮಟ್ಟ ಪಾಲನೆ ಮಾಡದೇ ಬ್ಲಫ್ ಸಮೀಪದ ಟೋಲ್ ಸಂಗ್ರಹ ಮಾಡಲು ಮುಂದಾಗಿದೆ ಎಂದು ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಅಧ್ಯಕ್ಷ ಎನ್.ಎಲ್.ಭರತ್ ರಾಜು ದೂರಿದರು.

ಕೆಲ ತಿಂಗಳ ಹಿಂದೆ ಏಕಾಏಕಿ ಟೋಲ್ ಸಂಗ್ರಹ ಪ್ರಾರಂಭಿಸಲು ಮುಂದಾದಾಗ ಸಂಘಟನೆ ವಿರೋಧ ವ್ಯಕ್ತಪಡಿಸಿತ್ತು. ಸ್ಥಳದಲ್ಲೇ ಪ್ರತಿಭಟನೆ ಮಾಡಿದ ಪರಿಣಾಮ ಟೋಲ್ ಸಂಗ್ರಹ ಸ್ಥಗಿತವಾಗಿತ್ತು. ಆದರೆ ಯಾವುದೇ ಸಮಸ್ಯೆ ಸರಿಪಡಿಸದೆ ಮತ್ತೆ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಖಂಡನೀಯ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಪ್ರಾಧಿಕಾರ ಹಲವೆಡೆ ನಿರ್ಮಿಸಿರುವ ಬಸ್ ಶೆಲ್ಟರ್‌ಗಳು ಅವೈಜ್ಞಾನಿಕವಾಗಿವೆ. ಬಸ್ ಮಾರ್ಗದಿಂದ ಬಹಳ ದೂರದಲ್ಲಿವೆ. ಅವುಗಳಿಂದ ಮಳೆ, ಗಾಳಿ, ಬಿಸಿಲಿಗೆ ರಕ್ಷಣೆಯೂ ದೊರಕುತ್ತಿಲ್ಲ. ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳೂ ಸೂಕ್ತವಾಗಿ ಇಲ್ಲ ಎಂದವರು ಆರೋಪಿಸಿದರು. ತಾಲೂಕಿನ ನಾಗರಿಕರ ವಾಹನಗಳಿಗೆ ಟೋಲ್ ಮೂಲಕ ಸಾಗಲು ಮುಕ್ತ ಅವಕಾಶವನ್ನು ನೀಡಬೇಕು. ಅದಕ್ಕೆ ಪಾಸ್ ಕಡ್ಡಾಯ ಮಾಡದೇ ಆಧಾರ್ ಕಾರ್ಡ್, ಗುರುತಿನ ಚೀಟಿ ಹಾಗೂ ಇತರೆ ದಾಖಲೆ ಪರಿಗಣಿಸಿ ಮುಕ್ತ ಅವಕಾಶವನ್ನು ಸಂಚಾರಕ್ಕೆ ನೀಡಬೇಕು ಎಂದರು. ಮದ್ದೂರು-ಕುಣಿಗಲ್-ತುಮಕೂರು ರಾಜ್ಯ ಹೆದ್ದಾರಿಯೂ ಗುಣಮಟ್ಟ ಹೊಂದಿಲ್ಲ ಎಂದು ಅವರು ದೂರಿದರು. ಇಷ್ಟೆಲ್ಲಾ ಇದ್ದರೂ ಟೋಲ್ ಸಂಗ್ರಹ ನಿಲ್ಲಿಸದಿದ್ದರೆ ತಾಲೂಕಿನ ಇತರ ಪ್ರಗತಿಪರ ಸಂಘಟನೆಗಳು ಹಾಗೂ ನಾಗರಿಕರೊಡನೆ ಸೇರಿ ಮುಂಬರುವ ದಿನಗಳಲ್ಲಿ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಎನ್.ಲಿಂಗರಾಜಮೂರ್ತಿ,ಮುಖಂಡರಾದ ನಂಜುಂಡಸ್ವಾಮಿ, ಮರಿಲಿಂಗೇಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net