ಮೋದೂರು ದಲಿತನ ಮನೆಯಲ್ಲಿ ಶಾಸಕ ಡಾ.ರಂಗನಾಥ್ ಗ್ರಾಮ ವಾಸ್ತವ್ಯ ; ಮನೆಯಲ್ಲಿ ಮಡಕೆ ಸಾಲು, ಸಗಣಿ ನೆಲ ಕಂಡು ಆಚ್ಚರಿ

27kunigal3
Published on

ಕುಣಿಗಲ್ : ಕಸಬಾ ಹೋಬಳಿ ಮೋದೂರಿಗೆ ಸೋಮವಾರ ರಾತ್ರಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಶಾಸಕ ಡಾ.ರಂಗನಾಥ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.ದಲಿತ ತಿಮ್ಮಪ್ಪ ಅವರ ಮನೆಯಲ್ಲಿ ಬಸ್ಸಾರು ಮುದ್ದೆ ಸವಿದು, ಸಗಣಿ ನೆಲದಲ್ಲಿ ಚಾಪೆಯ ಮೇಲೆ ಮಲಗುವ ಮೂಲಕ ಸರಳತೆಗೆ ಸಾಕ್ಷಿಯಾದರು.

ಶಾಸಕರು ಊಟ ಮಾಡುವ ಮುನ್ನ ತಿಮ್ಮಪ್ಪ ಮನೆ ನೋಡುವಾಗ ಮಡಕೆಗಳ ಸಾಲು ಕಂಡು ಆಶ್ಚರ್ಯಪಟ್ಟರು. ಆಧುನಿಕ ಯುಗದಲ್ಲಿ ಮಡಿಕೆಗಳ ಸಾಲು, ಸಗಣೆಯಲ್ಲಿ ಸಾರಿಸಿದ ನೆಲ ನೋಡಿ ಇದು ಗ್ರಾಮೀಣ ಸೊಗಡು ಎಂದು ಉದ್ಗರಿಸಿದರು. ಈ ನೆಲದಲ್ಲಿ ಮಲಗಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಇದು ನಿಜ ಕೂಡ ಎಂದು ಶಾಸಕ ಡಾ.ರಂಗನಾಥ್ ಖುಷಿಪಟ್ಟರು.

ತಿಮ್ಮಪ್ಪ ಅವರ ಮನೆಯ ಪಡಸಾಲೆ ಮೇಲೆ ಕುಳಿತ ಶಾಸಕ ಡಾ.ರಂಗನಾಥ್ ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಬೆಳಗ್ಗೆ ಎದ್ದು ವಿಹಾರ ಹಾಗೂ ವ್ಯಾಯಾಮ ಮಾಡಿ ನಂತರ 10 ಗಂಟೆಗೆ ಪಿಂಚಣಿ ಮತ್ತು ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಭಾಗಿಯಾದರು.

ಶಾಸಕರ ನಡಿಗೆ ಹಳ್ಳಿಯ ಕಡೆಗೆ ಎಂಬ ಘೋಷಣೆಯೊಂದಿಗೆ ಕಂದಾಯ ಅದಾಲತ್‌ನಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿ ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ರಕ್ತದಾನ ಶಿಬಿರ ಏರ್ಪಡಿಸಿ ಯುವಕರು ರಕ್ತದಾನ ಮಾಡಿದರು. ಸ್ಥಳದಲ್ಲೇ 500 ಮಂದಿಗೆ ಕರೊನಾ ಲಸಿಕೆ ಹಾಕಲಾಯಿತು.

ಜಾನುವಾರುಗಳಿಗೂ ಉಚಿತ ಆರೋಗ ಚಿಕಿತ್ಸಾ ಶಿಬಿರ ಏರ್ಪಡಿಸಿದ್ದು ವಿಶೇಷವಾಗಿತ್ತು. ಕೃಷಿ ಇಲಾಖೆಯಿಂದ ರೈತರಿಗೆ ಉಚಿತವಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಯಿತು. ಕಂದಾಯ ಇಲಾಖೆಯಿಂದ ಸ್ಥಳದಲ್ಲೇ ಅರ್ಜಿ ಸ್ವೀಕರಿಸಿ ವೃದ್ಧಾಪ್ಯ ವೇತನದ ಆದೇಶ ಪತ್ರ, ಹಕ್ಕು ಪತ್ರ ಇದ್ದರೂ ಖಾತೆಯಾಗದಿದ್ದವರಿಗೆ ಖಾತೆ, ಆಧಾರ್ ನೋಂದಣಿ, ಮತಪಟ್ಟಿಗೆ ಸೇರ್ಪಡೆ ಹಾಗೂ ತಿದ್ದುಪಡಿ, ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ, ವೃದ್ಧರಿಗೆ ಊರುಗೋಲು ಹಾಗೂ ಕನ್ನಡಕಗಳನ್ನು ಉಚಿತವಾಗಿ ವಿತರಣೆ ಸೇರಿ ತಾಲೂಕು ಆಡಳಿತದಿಂದ ಸಿಗಬೇಕಾದ ಅನೇಕ ಸವಲತ್ತುಗಳನ್ನು ಸ್ಥಳದಲ್ಲೇ ವಿತರಣೆ ಮಾಡುವ ಮೂಲಕ ಗ್ರಾಮವಾಸ್ತವ್ಯ ಹಾಗೂ ಕಂದಾಯ ಅದಾಲತ್ ಯಶಸ್ವಿಗೊಳಿಸಲಾಯಿತು.

ಇಒ ಜೋಸೆಫ್, ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯ, ತಾಲೂಕು ಆರೋಗ್ಯಾಧಿಕಾರಿ ಜಗದೀಶ್, ಸಂತೆಮಾವತ್ತೂರು ಗ್ರಾಪಂ ಅಧ್ಯಕ್ಷ ಮಂಜುನಾಥ್, ಸದಸ್ಯ ದೀಪಕ್‌ಗೌಡ, ತಾಪಂ ಮಾಜಿ ಅಧ್ಯಕ್ಷ ಎಸ್.ಆರ್.ಚಿಕ್ಕಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡ ಮಾಗಡಯ್ಯ ಇದ್ದರು.

ಇನ್ನೊಂದು ಬಾರಿ ಅವಕಾಶ ನೀಡಿ : ಮೊದಲ ಬಾರಿಗೆ ಶಾಸಕರನ್ನಾಗಿ ಆಶೀರ್ವಾದ ಮಾಡಿ ತಾಲೂಕಿನ ಅಭಿವೃದ್ಧಿ ಮಾಡಲು ಅವಕಾಶ ನೀಡಿದ್ದೀರಾ... ಆದರೆ ಕೆಲಸ ಮಾಡಿದ್ದರಲ್ಲಿ ನನಗೆ ಇನ್ನೂ ಸಮಾಧಾನ ಇಲ್ಲ. ತಾಲೂಕಿನ ಎಲ್ಲ ಕೆರೆ-ಕಟ್ಟೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಳ ಮಾಡಬೇಕು. ರಸ್ತೆಗಳನ್ನು ಡಾಂಬರೀಕರಣ ಮಾಡಬೇಕು. ಜತೆಗೆ ತಾಲೂಕಿನ ಸಂಪೂರ್ಣವಾಗಿ ಸಮಗ್ರ ಅಭಿವೃದ್ಧಿ ಮಾಡುವುದೇ ನನ್ನ ಮುಖ್ಯ ಗುರಿ. ರಾಜ್ಯ ರಾಜಕಾರಣದಲ್ಲಿ ಇಂದು ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಯಾವಾಗ ಬೇಕಾದರೂ ಚುನಾವಣೆ ಎದುರಾಗಬಹುದು. ಇನ್ನೊಂದು ಬಾರಿ ನನಗೆ ಅವಕಾಶ ಮಾಡಿಕೊಟ್ಟರೆ ತಾಲೂಕಿನ ಮಗನಾಗಿ ಅಭಿವೃದ್ಧಿ ಮಾಡುವ ಮೂಲಕ ನಿಮ್ಮ ಋಣ ತೀರಿಸುತ್ತೇನೆ ಎಂದು ಶಾಸಕ ಡಾ.ರಂಗನಾಥ್ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net