

ಮಂಡ್ಯ: ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ರಾಮನಗರ ಜಿಲ್ಲೆಗೆ ಐಐಟಿ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಬೇಕು. ಅದೇ ನಮ್ಮ ಮಂಡ್ಯ ಜಿಲ್ಲೆಯಲ್ಲಿ ವಿವಿ ಇರಬಾರದೇ ಎಂದು ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ ಪ್ರಶ್ನಿಸಿದರು.
ಮಂಡ್ಯ ವಿವಿಗೆ ಭೇಟಿ ನೀಡಿ ಹಲವು ಮಾಹಿತಿ ಪಡೆದು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಲ್ಲಿ ವಿಶ್ವವಿದ್ಯಾನಿಲಯ ಪ್ರಾರಂಭವಾಗಬೇಕೆನ್ನುವುದು ಜಿಲ್ಲೆಯ ಜನರು ಬಹುವರ್ಷದ ಕನಸಾಗಿತ್ತು. ಕೆಲವೇ ವರ್ಷದಲ್ಲಿ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತಾಗಲಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದೆ. ಹೀಗಿರುವಾಗ ಮಂಡ್ಯ ವಿವಿ ಮುಚ್ಚುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿರುವುದು ಸರಿಯಲ್ಲ ಎಂದರು.
ನಮ್ಮ ವಿವಿಯನ್ನು ಉಳಿಸಿಕೊಡಿ. ಇದರಲ್ಲಿ ರಾಜಕೀಯ ಬೇಡ. ಪಕ್ಷ ಯಾವುದೇ ಇರಲಿ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕೆಲಸವನ್ನು ಮಾಡೋಣ. ಮಂಡ್ಯ ವಿವಿಯಲ್ಲಿ ಹಲವು ಸೌಲಭ್ಯವಿದೆ. ಹೊರ ಜಿಲ್ಲೆ, ರಾಜ್ಯದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದ್ದರಿಂದ ವಿವಿ ವಿಲೀನಗೊಳಿಸುವ ಕೆಲಸ ಬೇಡ. ಒಂದು ವೇಳೆ ರಾಜ್ಯಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳದಿದ್ದರೆ ಪ್ರತಿಭಟನೆ ಮತ್ತು ವಿಧಾನಸೌಧ ಚಲೋ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.