

ಹುಣಸೂರು: ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ 40ಕ್ಕೂ ಹೆಚ್ಚು ಅಹವಾಲುಗಳನ್ನು ಸ್ವೀಕರಿಸಲಾಯಿತು. 20ಕ್ಕೂ ಹೆಚ್ಚಿನವರು ಮೌಖಿಕವಾಗಿ ದೂರುಗಳನ್ನು ನೀಡಿದರು.
ಸಭೆಯಲ್ಲಿ ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಹುಣಸೂರು ನಗರದ ಸ್ವಚ್ಛತೆಯನ್ನು ಕಾಪಾಡುತ್ತಿರುವ ಪೌರಕಾರ್ಮಿಕರ ಕಾಲನಿಗೆ ಕಳೆದ 20 ವರ್ಷಗಳಿಂದ ಕಾವೇರಿ ಕುಡಿಯುವ ನೀರಿನ ಸರಬರಾಜು ಆಗುತ್ತಿಲ್ಲ. ನಗರಸಭೆಯ ಬೇಜವಾಬ್ದಾರಿ ವರ್ತನೆ ಪೌರಕಾರ್ಮಿಕರನ್ನು ಬಾಧಿಸುತ್ತಿದೆ. ಕರ್ತವ್ಯದ ವೇಳೆ ನಿಧನರಾಗಿರುವ 6 ಪೌರಕಾರ್ಮಿಕ ಕುಟುಂಬಕ್ಕೆ ಇಂದಿಗೂ ಪರಿಹಾರ ಮತ್ತು ಕುಟುಂಬದ ವ್ಯಕ್ತಿಗೆ ಉದ್ಯೋಗ ಲಭ್ಯವಾಗಿಲ್ಲ. ಹುಣಸೂರು ನಗರವನ್ನು ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಡಿವೈಡರ್ ಅಳವಡಿಸುವ ಮೂಲಕ ಹೆದ್ದಾರಿ ಪ್ರಾಧಿಕಾರ ಕ್ರಮವಹಿಸಬೇಕು ಎಂದು ಕೋರಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಕೊಳಗಟ್ಟ ಕೃಷ್ಣ ಮಾತನಾಡಿ, ಬಿಳಿಕೆರೆ ಹೋಬಳಿ ಮನುಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನುಗನಹಳ್ಳಿ ಗೇಟ್ ಬಳಿ 25ಕ್ಕೂ ಹೆಚ್ಚು ದಲಿತ ಕುಟುಂಬಗಳು ಕಳೆದ 50 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಈಗ ಅವರನ್ನು ಆ ಸ್ಥಳದಿಂದ ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ. ಈ ಕುರಿತು ವಿಜಯವಾಣಿ ಪತ್ರಿಕೆಯಲ್ಲಿ ತಿಂಗಳ ಹಿಂದೆ ವಿಸ್ತೃತ ವಿಶೇಷ ವರದಿ ಪ್ರಕಟಗೊಂಡಿದೆ. ಜಿಲ್ಲಾಧಿಕಾರಿಗಳ ಮೂಲಕ ದಲಿತ ಕುಟುಂಬಕ್ಕೆ ಕಾನೂನಾತ್ಮಕ ರಕ್ಷಣೆ ನೀಡಲು ಸಹಕರಿಸಬೇಕೆಂದು ಕೋರಿದರು.
ಎಂಎಲ್‌ಸಿ ಎಚ್.ವಿಶ್ವನಾಥ್ ಮಾತನಾಡಿ, ನಗರದಲ್ಲಿ ಸಂಚಾರ ದಟ್ಟಣೆ, ಅಪಘಾತ, ಸಿಸಿ ಕ್ಯಾಮರಾ ಅಳವಡಿಕೆ, ರಸ್ತೆ ದುರಸ್ತಿ, ಜಮೀನಿಗೆ ಹೋಗಲು ರಸ್ತೆ ಹೀಗೆ ಹಲವು ಅಹವಾಲುಗಳನ್ನು ಸ್ವೀಕರಿಸಲಾಗಿದ್ದು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಮೂಲಕ ಕ್ರಮಕ್ಕೆ ಶ್ರಮಿಸುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ಪ್ರತಿ ವಾರವೂ ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆಗೆ ಪರಿಹಾರ ದೊರಕಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಸಭೆಯಲ್ಲಿ ಮುಖಂಡರಾದ ಡಿ.ಕೆ.ಕುನ್ನೇಗೌಡ, ಪುಟ್ಟರಾಜು, ಸತ್ಯಪ್ಪ ಇತರರು ಇದ್ದರು.