

ಮಂಡ್ಯ: ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಿಗೆ ಕೆಲಸ ಮಾಡುತ್ತಿರುವವರಿಗೆ ಮಾಸಿಕ 10,500 ರೂ ವೇತನ ನೀಡುತ್ತಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಬಿ.ವಿವೇಕಾನಂದ, ಅಪರಾಧ ಕೃತ್ಯವೆಸಗಿ ಜೈಲಿನಲ್ಲಿರುವ ಕೈದಿಗಳಿಗೆ ಮಾಸಿಕ 18 ಸಾವಿರ ರೂ ಸಿಗಲಿದೆ. ಆದರೆ ಪದವಿ ಪೂರೈಸಿಕೊಂಡಿರುವವರಿಗೆ ಕೈದಿಗಳಿಗಿಂತ ಕಡಿಮೆ ವೇತನ ಕೊಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೊಲೆ, ಸುಲಿಗೆ ಸೇರಿದಂತೆ ಇತರೆ ಕ್ರಿಮಿನಲ್ ಆರೋಪದ ಮೇಲೆ ಜೈಲಿನಲ್ಲಿರುವ ಕೈದಿಗೆ ಪ್ರತಿದಿನ 600 ರೂ ಸಂಬಳ ನೀಡಲಾಗುತ್ತದೆ. ಅದೇ ಬಿ.ಎ, ಬಿಎಸ್ಸಿ, ಬಿ.ಕಾಂ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ಅತಿಥಿ ಶಿಕ್ಷಕರಿಗೆ ಪ್ರತಿದಿನ 350 ರೂ ಸಂಬಳ ಕೊಡಲಾಗುತ್ತಿದೆ. ಇದು ಧರ್ಮವೇ?. ಅದು ಕೂಡ ನಾಲ್ಕೈದು ತಿಂಗಳಿಗೊಮ್ಮೆ ವೇತನ ಕೊಡುತ್ತಾರೆ ಎಂದರು.
10,500 ರೂ ಸಂಬಳ ಪಡೆಯುವ ಅತಿಥಿ ಶಿಕ್ಷಕ ಮನೆ ಬಾಡಿಗೆ, ಪೆಟ್ರೋಲ್ ಖರ್ಚು ಭರಿಸಿ ಸಂಸಾರ ನಿಭಾಯಿಸುವುದು ಹೇಗೆ ತಿಳಿಯುತ್ತಿಲ್ಲ ಎಂದಾಗ ಪ್ರತಿಕ್ರಿಯಿಸಿದ ಬಿಇಒ ಮಹದೇವು, ವೇತನ ನಿಗದಿ ಸರ್ಕಾರದ ಪಾಲಿಸಿ ಎಂದರು. ಇದಕ್ಕೆ ಆಕ್ಷೇಪಿಸಿದ ಎಂಎಲ್‌ಸಿ, ವಾಸ್ತವ ಸ್ಥಿತಿಯನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ತಿಳಿಸಬೇಕು. ಅದೇ ರೀತಿ ಪ್ರತಿ ತಿಂಗಳು ಸಂಬಳ ನೀಡುವ ವ್ಯವಸ್ಥೆ ಮಾಡಲು ಪತ್ರ ವ್ಯವಹಾರ ನಡೆಸಿ ಎಂದು ತಿಳಿ ಹೇಳಿದರು.
ಕಾಸು ಕೊಟ್ಟರೂ ನಿಂತೇ ಪ್ರಯಾಣ
ರಾಜ್ಯಸರ್ಕಾರ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಶಕ್ತಿ ಯೋಜನೆಯ ವಿರೋಧಿ ನಾನಲ್ಲ. ಆದರೆ ಪುರುಷರು ಕಾಸು ಕೊಟ್ಟು ಟಿಕೆಟ್ ಖರೀದಿಸಿ ನಿಂತೇ ಪ್ರಯಾಣ ಮಾಡಬೇಕಿರುವುದು ಬೇಸರದ ವಿಷಯ ಎಂದು ಎಂಎಲ್‌ಸಿ ಕೆ.ವಿವೇಕಾನಂದ ಹೇಳಿದರು.
ನಾನು ನಾಲ್ಕು ಜಿಲ್ಲೆಯ ಪರಿಷತ್ ಸದಸ್ಯನಾಗಿದ್ದು, ಮೈಸೂರು ನಗರದಲ್ಲಿರುವ ಶಿಕ್ಷಕರು ಗ್ರಾಮೀಣ ಶಾಲೆಗಳಿಗೆ ತೆರಳಲು ಹಣ ನೀಡಿ ಬಸ್ ಹತ್ತಿದರೆ ನಿಂತುಕೊಂಡು ತೆರಳಬೇಕಾದ ದುಸ್ಥಿತಿ ಎದುರಾಗಿದೆ. ಮತ್ತೇ ತರಗತಿಯಲ್ಲಿ ನಿಂತುಕೊಂಡೇ ಪಾಠ ಮಾಡಬೇಕು. ಹೀಗಾದರೆ ಅವರ ಆರೋಗ್ಯ ಸ್ಥಿತಿ ಏನಾಗಬೇಕು?. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಹೆಚ್ಚುವರಿ ಬಸ್ ಒದಗಿಸಲು ಕ್ರಮ ವಹಿಸಬೇಕೆಂದು ಮನವಿ ಮಾಡಿದರು. ಇನ್ನು ಸರ್ಕಾರಿ ಶಾಲೆಗಳ ದುರಸ್ತಿ ಹಾಗೂ ಮುಖ್ಯವಾಗಿ ಶೌಚಗೃಹ ನಿರ್ಮಾಣಕ್ಕೆ ಆದ್ಯತೆ ಕೊಡಬೇಕು ಎಂದು ಸೂಚನೆ ನೀಡಿದರು.