ರಸ್ತೆಯಲ್ಲೇ ಮದ್ಯ ಸೇವಿಸುತ್ತಿದ್ದ ಎಂಎಲ್‌ಸಿ ಪುತ್ರ! ತಡೆದಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ...

crime scene tape of  mysterious case in cenematic tone with copy space
crime scene tape focus on word 'crime' in cenematic dark tone with copy space
Published on

ಬೆಂಗಳೂರು: ತಡರಾತ್ರಿ ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಮದ್ಯ ಸೇವಿಸುತ್ತಿದ್ದುದನ್ನು ಪ್ರಶ್ನಿಸಿದ ಪೊಲೀಸರ ಮೇಲೆ ಕಾಂಗ್ರೆಸ್ ಎಂಎಲ್‌ಸಿಯೊಬ್ಬರ ಪುತ್ರ ಮತ್ತು ಆತನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಮೂವರನ್ನು ಬಂಧಿಸಿರುವ ಅಮೃತಹಳ್ಳಿ ಪೊಲೀಸರು ಉಳಿದವರ ಪತ್ತೆಗೆ ಬಲೆ ಬೀಸಿದ್ದಾರೆ. ಕಾಂಗ್ರೆಸ್ ಎಂಎಲ್‌ಸಿ ನಸೀರ್ ಅಹಮದ್ ಪುತ್ರ ಫಯಾಜ್ ಅಹಮದ್ (24), ಬಟ್ಟೆ ವ್ಯಾಪಾರಿಗಳ ಮಕ್ಕಳಾದ ಝೈನ್ (24) ಮತ್ತು ಇಮ್ರಾನ್ (24) ಬಂಧಿತರು. ತಲೆಮರೆಸಿಕೊಂಡಿರುವ ಇತರ ಮೂವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹೆಬ್ಬಾಳ ಬಿಎಂಟಿಸಿ ಬಸ್ ಡಿಪೋ ಮುಂಭಾಗ ಸಮೀಪದ ಸರ್ವೀಸ್ ರಸ್ತೆಯಲ್ಲಿ ಭಾನುವಾರ ರಾತ್ರಿ 11 ಗಂಟೆಯಲ್ಲಿ ಫಯಾಜ್ ಮತ್ತು ಆತನ ಸ್ನೇಹಿತರು ಎರಡು ಕಾರು ನಿಲ್ಲಿಸಿಕೊಂಡು ಜೋರಾಗಿ ಶಬ್ದ ಮಾಡುತ್ತಿದ್ದರು. ಅಮೃತಹಳ್ಳಿ ಠಾಣೆ ಪೇದೆ ಶ್ರೀನಿವಾಸ್ ಮತ್ತು ಮುಖ್ಯ ಪೇದೆ ಗಸ್ತಿನಲ್ಲಿದ್ದರು. ರಸ್ತೆಯಲ್ಲಿ ಕಾರು ನಿಲ್ಲಿಸಿಕೊಂಡು ಗಲಾಟೆ ಮಾಡುತ್ತಿದ್ದನ್ನು ಗಮನಿಸಿ, ‘ಇಲ್ಲಿ ಕಾರು ನಿಲ್ಲಿಸಿಕೊಂಡು ನಿಲ್ಲಬೇಡಿ. ದರೋಡೆಕೋರರ ಹಾವಳಿ ಹೆಚ್ಚಿದ್ದು, ಹೊರಟು ಹೋಗಿ’ ಎಂದು ಸೂಚಿಸಿದ್ದಾರೆ. ಆಗ ಕಾರುಗಳನ್ನು ಹತ್ತಿದ ಯುವಕರು ಮುಂದೆ ಸಾಗಿದ್ದಾರೆ. ಯುವಕರು ತೆರಳುತ್ತಾರೆ ಎಂದು ಗಸ್ತು ಪೊಲೀಸರು ಮುಂದೆ ಸಾಗಿದ್ದಾರೆ. ಆದರೆ, ಯುವಕರು ಮತ್ತೆ ವಾಪಸ್ ಬಂದು ಅದೇ ಜಾಗದಲ್ಲಿ ಕಾರು ನಿಲ್ಲಿಸಿಕೊಂಡು ಸಿಗರೇಟ್ ಸೇದುತ್ತ ನಿಂತುಕೊಂಡಿದ್ದರು. ಇತ್ತ ಸುತ್ತಾಡಿಕೊಂಡು ಪೊಲೀಸರು ವಾಪಸ್ ಬಂದು ನೋಡಿದಾಗ ಅಲ್ಲಿಯೇ ಕಾರುಗಳು ನಿಂತಿರುವುದು ನೋಡಿ ಸ್ಥಳಕ್ಕೆ ತೆರಳಿ ಗದರಿದ್ದಾರೆ.

ಪೊಲೀಸರ ಮೇಲೆಯೇ ಕೆರಳಿದ ಯುವಕರ ಗ್ಯಾಂಗ್, ಅವಾಚ್ಯ ಶಬ್ದಗಳಿಂದ ನಿಂದಿಸಿ ಪೇದೆ ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದು ರಂಪಾಟ ನಡೆಸಿದ್ದಾರೆ. ಮುಖ್ಯಪೇದೆ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಎರಡು ಚೀತಾ ಮತ್ತು ಒಂದು ಹೊಯ್ಸಳ ವಾಹನ ಬಂದು ಸುತ್ತುವರಿಯುತ್ತಿದ್ದಂತೆ ತಪ್ಪಿಸಿಕೊಳ್ಳಲು ಆರೋಪಿಗಳು ಮುಂದಾಗಿದ್ದಾರೆ. ಬೆನ್ನತ್ತಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಕಾರು ಜಪ್ತಿ ಮಾಡಿ ಠಾಣೆಗೆ ಕರೆತಂದಿದ್ದಾರೆ. ಹಲ್ಲೆಗೆ ಒಳಗಾದ ಶ್ರೀನಿವಾಸ್ ಕೊಟ್ಟ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದಡಿ ಅಮೃತಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಂಠಮಟ್ಟ ಮದ್ಯ ಸೇವನೆ?: ಎಂಎಲ್‌ಸಿ ಪುತ್ರ ಮತ್ತು ಆತನ ಗ್ಯಾಂಗ್ ಎಂ.ಜಿ. ರಸ್ತೆಯಲ್ಲಿ ಮದ್ಯದ ಪಾರ್ಟಿ ಮುಗಿಸಿಕೊಂಡು ಕಾರಿನಲ್ಲಿ ಹೆಬ್ಬಾಳ ರಸ್ತೆಗೆ ಬಂದಿದ್ದಾರೆ. ಮಾನ್ಯತಾ ಟೆಕ್ ಪಾರ್ಕ್ ಮತ್ತು ಲುಂಬಿನಿ ಗಾರ್ಡನ್ ಸಮೀಪ ಕಾರಿನಲ್ಲಿ ಸುತ್ತಾಡಿಕೊಂಡು ಮದ್ಯ ಸೇವನೆ ಮಾಡಿರುವುದು ಗೊತ್ತಾಗಿದೆ. ಬಂಧಿತ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಮದ್ಯ ಸೇವನೆ ಮಾಡಿರುವುದು ಕಂಡುಬಂದಿದ್ದು, ಅಂತಿಮ ವರದಿ ಬರಬೇಕಿದೆ ಎಂದು ಅಮೃತಹಳ್ಳಿ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net