ಪಕ್ಷನಿಷ್ಠರಿಗೆ ಟಿಕೆಟ್ ಕೊಡಿ: ಹಾಲನೂರು ಎಸ್.ಲೇಪಾಕ್ಷ ಒತ್ತಾಯ

09Tmk_MLC_Election (1)
Published on

ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯಲ್ಲಿ ಈಗಿನಿಂದಲೇ ಭಿನ್ನಮತ ಹೊಗೆಯಾಡತೊಡಗಿದ್ದು, ಮೂಲ, ವಲಸಿಗರ ನಡುವೆ ಕಿತ್ತಾಟ ಆರಂಭವಾಗಿದೆ. ಜೆಡಿಎಸ್‌ನಿಂದ ಬಿಜೆಪಿಗೆ ಬಂದಿರುವ ಶಿರಾ ಮೂಲದ ಎಂ. ಚಿದಾನಂದಗೌಡ ಬದಲು ಪಕ್ಷನಿಷ್ಠರಿಗೆ ಟಿಕೆಟ್ ನೀಡಬೇಕೆಂಬ ಒಕ್ಕೊರಲ ಆಗ್ರಹ ಆಕಾಂಕ್ಷಿಗಳದ್ದಾಗಿದೆ.

ಈಗಾಗಲೇ ಹೈಕಮಾಂಡ್‌ಗೆ ಶಿಫಾರಸು ಮಾಡಿರುವ ಚಿದಾನಂದಗೌಡ ಹೆಸರು ಬದಲಿಸಲು ಪರಿಶೀಲಿಸಿ, ಪಕ್ಷನಿಷ್ಠರಿಗೆ ಟಿಕೆಟ್ ನೀಡುವಂತೆ ರಾಜ್ಯ ವರಿಷ್ಠರು ಮನವಿ ಮಾಡಬೇಕೆಂದು ಆಕಾಂಕ್ಷಿಗಳಲ್ಲೊಬ್ಬರಾದ ಹಾಲನೂರು ಎಸ್.ಲೇಪಾಕ್ಷ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಆಗ್ನೇಯ ಪದವೀಧರ ಕ್ಷೇತ್ರ ದಾವಣಗೆರೆ, ಚಿತ್ರದುರ್ಗ,ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳ ವ್ಯಾಪ್ತಿ ಹೊಂದಿದ್ದು, ಚಿದಾನಂದಗೌಡಗೆ ಟಿಕೆಟ್ ನೀಡಲು ಮುಂದಾಗಿರುವುದರಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾದ ನಮಗೆ ಅನ್ಯಾಯವಾದಂತಾಗಿದೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರು ಈ ಬಗ್ಗೆ ಗಮನಹರಿಸಿ, ನ್ಯಾಯ ದೊರಕಿಸಿಕೊಡುತ್ತಾರೆಂಬ ವಿಶ್ವಾಸವಿದೆ ಎಂದರು.

ನಿಷ್ಠಾವಂತ ಕಾರ್ಯಕರ್ತರೊಬ್ಬರನ್ನು ಪಕ್ಷದ ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಿಸಿದರೆ ಗೆಲುವಿಗೆ ನಾವೆಲ್ಲಾ ಒಟ್ಟಿಗೆ ಶ್ರಮಿಸುತ್ತೇವೆ ಎಂದು ಮತ್ತೊಬ್ಬ ಆಕಾಂಕ್ಷಿ ಚಿತ್ರದುರ್ಗದ ಡಾ.ಆನಂದ್ ಕಿರಿಶ್ಯಾಳ ಹೇಳಿದರು. ಆಕಾಂಕ್ಷಿಗಳಾದ ದಾವಣಗೆರೆಯ ಜಯಪ್ರಕಾಶ್ ಕೊಂಡಜ್ಜಿ, ಪಿ.ಆರ್.ಬಸವರಾಜು, ಡಾ.ಜೆ.ಮಂಜುನಾಥಗೌಡ, ಸಿ.ಮಲ್ಲಿಕಾರ್ಜುನ ಇತರರಿದ್ದರು.

ಶಿರಾದ ಚಿದಾನಂದ ಎಂ.ಗೌಡ ಹಾಗೂ ದಾವಣಗೆರೆಯ ಡಾ.ಜೆ.ಮಂಜುನಾಥಗೌಡ ಹೆಸರನ್ನು ಕೇಂದ್ರ ಸಮಿತಿಗೆ ರಾಜ್ಯಸಮಿತಿ ಶಿಫಾರಸು ಮಾಡಿತ್ತು. ಅಧಿಕೃತವಾಗಿ ಅಭ್ಯರ್ಥಿ ಘೋಷಿಸುವ ಮುನ್ನವೇ ಚಿದಾನಂದಗೌಡ ಭಿತ್ತಿಪತ್ರಗಳು, ಬ್ಯಾನರ್‌ಗಳು ಹಾಗೂ ಕರ ಪತ್ರಗಳನ್ನು ಮುದ್ರಿಸಿ ತಾವೇ ಅಭ್ಯರ್ಥಿ ಎಂದು ಪ್ರಚಾರ ಮಾಡಿ ಬಿಜೆಪಿ ಘಟಕಕ್ಕೆ ಅವಮಾನ ಮಾಡಿದ್ದಾರೆ. ಹಾಲನೂರು ಲೇಪಾಕ್ಷ ಬಿಜೆಪಿ ಟಿಕೆಟ್ ಆಕಾಂಕ್ಷಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net