ವಿಧಾನ ಪರಿಷತ್ ಚುನಾವಣೆ: ಉತ್ತರ ಕನ್ನಡದಲ್ಲಿ ಹ್ಯಾಟ್ರಿಕ್​ ಕನಸಿನಲ್ಲಿ ಕಾಂಗ್ರೆಸ್​, ಚಿಕ್ಕಮಗಳೂರಿನಲ್ಲಿ ಜೆಡಿಎಸ್ ನಡೆ ಇನ್ನೂ ಅಸ್ಪಷ್ಟ..

Election
Published on

ಹಾಟ್ರಿಕ್ ಕನಸಿನಲ್ಲಿ ಕಾಂಗ್ರೆಸ್, ಖಾತೆ ಓಪನ್​ಗೆ ಬಿಜೆಪಿ ತವಕ

ಭೀಮಣ್ಣ-ಗಣಪತಿ ರಾಜಕೀಯ ಅಳಿವು-ಉಳಿವಿನ ಪ್ರಶ್ನೆ

ಗಣಪತಿ ಉಳ್ವೇಕರ್, ಭೀಮಣ್ಣ ನಾಯ್ಕ

ಉತ್ತರ ಕನ್ನಡ ವಿಧಾನ ಪರಿಷತ್ ಕ್ಷೇತ್ರ

| ಸುಭಾಸ ಧೂಪದಹೊಂಡ ಕಾರವಾರ

ವಿಧಾನ ಪರಿಷತ್ ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರವನ್ನು ಮೊದಲ ಬಾರಿ ಗೆದ್ದು ಹೊಸ ಇತಿಹಾಸ ನಿರ್ವಿುಸಲು ಬಿಜೆಪಿ ಹವಣಿಸುತ್ತಿದೆ. ಸತತ ಎರಡು ಬಾರಿ ಗೆದ್ದಿರುವ ಕ್ಷೇತ್ರವನ್ನು ಉಳಿಸಿಕೊಂಡು ಹ್ಯಾಟ್ರಿಕ್ ಸಾಧನೆ ಮಾಡಲು ಕಾಂಗ್ರೆಸ್ ಹೋರಾಟ ನಡೆಸುತ್ತಿದೆ.

ಕಣದಲ್ಲಿ ಐವರು ಅಭ್ಯರ್ಥಿಗಳಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆಯೇ ನೇರ ಪೈಪೋಟಿ ಇದೆ. ನಾಲ್ಕು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿರುವ ಕಾಂಗ್ರೆಸ್​ನ ಭೀಮಣ್ಣ ನಾಯ್ಕ, ಒಮ್ಮೆವಿಧಾನಸಭೆ ಮತ್ತೊಮ್ಮೆ ಪರಿಷತ್​ನಲ್ಲಿ ಸೋಲು ಕಂಡಿರುವ ಗಣಪತಿ ದುಮ್ಮಾ ಉಳ್ವೇಕರ್ ಅದೃಷ್ಟ ಪರೀಕ್ಷೆಗಿಳಿದಿದ್ದು, ಇಬ್ಬರಿಗೂ ಇದು ರಾಜಕೀಯ ಭವಿಷ್ಯದ ಅಳಿವು, ಉಳಿವಿನ ಚುನಾವಣೆಯಾಗಿದೆ.

ಎರಡು ಬಾರಿ ಎಂಎಲ್​ಸಿಯಾಗಿದ್ದ ಕಾಂಗ್ರೆಸ್​ನ ಶ್ರೀಕಾಂತ ಘೋಟ್ನೇಕರ್ ಹಳಿಯಾಳ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಇದರಿಂದ ಅಭ್ಯರ್ಥಿ ಆಯ್ಕೆಗೆ ಕೈ ಪಾಳಯ ಕೊಂಚ ತಿಣುಕಾಟ ನಡೆಸಬೇಕಾಯಿತು. ಜಿಲ್ಲೆಯಲ್ಲಿ ಹೆಚ್ಚಿನ ಮತದಾರರನ್ನು ಹೊಂದಿರುವ ನಾಮಧಾರಿ ಸಮುದಾಯಕ್ಕೆ ಹಾಲಿ ಅಭ್ಯರ್ಥಿ ಭೀಮಣ್ಣ ನಾಯ್ಕ ಸೇರಿರುವುದೇ ತಮ್ಮ ಪ್ಲಸ್ ಪಾಯಿಂಟ್ ಎಂಬ ಲೆಕ್ಕಾಚಾರದಲ್ಲಿ ಕೈ ನಾಯಕರಿದ್ದಾರೆ. ಎಂಎಲ್​ಸಿ ಚುನಾವಣೆ ಪಕ್ಷದ ಆಧಾರದ ಮೇಲೆ ನಡೆಯುತ್ತದೆ. ಇಲ್ಲಿ ಜಾತಿ ಪ್ರಭಾವ ಬೀರುವುದಿಲ್ಲ ಎಂಬುದು ಬಿಜೆಪಿ ಬೆಂಬಲಿಗರ ಅಭಿಪ್ರಾಯ. ಬಿಜೆಪಿ ತನ್ನ ಸಂಘಟನಾ ಶಕ್ತಿ ಹಾಗೂ ನಾಯಕರ ಮೇಲೆ ನಂಬಿಕೆ ಇಟ್ಟು ಪ್ರಚಾರ ಆರಂಭಿಸಿದೆ. ಐವರು ಎಂಎಲ್​ಎಗಳು, ಎಂಪಿ, ಎಂಎಲ್​ಸಿ ತಮ್ಮ ಬಲ ಎಂದು ಕಮಲ ನಾಯಕರು ಹೇಳುತ್ತಿದ್ದಾರೆ. ಪಕ್ಷದ ಮುಖಂಡ ದತ್ತಾತ್ರೆಯ ನಾಯ್ಕ ಎಂಬುವರು ಬಂಡಾಯವಾಗಿ ಕಣಕ್ಕಿಳಿದರೂ ಅದು ಫಲಿತಾಂಶದ ಮೇಲೆ ಪರಿಣಾಮ ಬೀಳುವಂತೆ ಮಾಡುತ್ತಿಲ್ಲ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯ 280 ಸದಸ್ಯರಿದ್ದು, ಅದರಲ್ಲಿ 115 ಬಿಜೆಪಿ, 100 ಕಾಂಗ್ರೆಸ್, 10 ಜೆಡಿಎಸ್, ಹಾಗೂ 56 ಪಕ್ಷೇತರರಿದ್ದಾರೆ. 227 ಗ್ರಾಪಂಗಳಲ್ಲಿ 2929 ಸದಸ್ಯರಿದ್ದಾರೆ. ಅವರ ಪೈಕಿ 1480 ಬಿಜೆಪಿ, 1159 ಕಾಂಗ್ರೆಸ್, 40 ಜೆಡಿಎಸ್ ಬೆಂಬಲಿತರಿದ್ದಾರೆ. 260 ಜನ ಯಾವುದೇ ಪಕ್ಷ ಬೆಂಬಲಿಸದೇ ಇರುವವರಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಮತದಾರರ ಸಂಖ್ಯೆ ಅಧಿಕವಾಗಿದೆ. ಆದರೆ, ಜಾತಿ ಲೆಕ್ಕಾಚಾರ ಹಾಗೂ ಪಕ್ಷದೊಳಗಿನ ಒಳ ಸುಳಿ ಬಿಜೆಪಿ ಗೆಲುವಿಗೆ ಸವಾಲು ತಂದೊಡ್ಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಜೆಡಿಎಸ್ ಬೆಂಬಲ ಯಾರಿಗೆ?: 2015ರ ಎಂಎಲ್​ಸಿ ಚುನಾವಣೆಯಲ್ಲಿ ಜೆಡಿಎಸ್ ಕೇವಲ 22 ಮೊದಲ ಪ್ರಾಶಸ್ಱದ ಮತ ಪಡೆದಿತ್ತು. ಈ ಬಾರಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸಿಲ್ಲ. ಸುಮಾರು 50 ಜೆಡಿಎಸ್ ಬೆಂಬಲಿತ ಮತದಾರರಿದ್ದು, ಅವರು ಯಾರಿಗೆ ಬೆಂಬಲ ನೀಡಬೇಕು ಎಂಬ ಬಗ್ಗೆ ಇದುವರೆಗೂ ಪಕ್ಷದ ವರಿಷ್ಠರಿಂದ ಯಾವುದೇ ಸೂಚನೆ ಬಂದಿಲ್ಲ. ಜಿಲ್ಲೆಯಲ್ಲಿರುವ ಒಂದಿಬ್ಬರು ಮುಖಂಡರೂ ಎಂಎಲ್​ಸಿ ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸದೇ ತಟಸ್ಥರಾಗಿದ್ದಾರೆ.

ಮತದಾನದ ಹಕ್ಕಿಲ್ಲ: ಹೊನ್ನಾವರ ತಾಲೂಕಿನ ಮಂಕಿಯ ಮೂರು ಗ್ರಾಪಂಗಳು ಸೇರಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದೆ. ಪಪಂ ಚುನಾವಣೆ ನಡೆದಿಲ್ಲ. ಅತ್ತ ಗ್ರಾಪಂ ಚುನಾವಣೆಯೂ ಇಲ್ಲ. ಇದರಿಂದ ಅಲ್ಲಿ ಈ ಚುನಾವಣೆ ಕಾವಿಲ್ಲ. ಇನ್ನು ಜಿಪಂ, ತಾಪಂ ಸದಸ್ಯರೂ ಇಲ್ಲದ ಕಾರಣ 100ಕ್ಕೂ ಹೆಚ್ಚು ಮತದಾರರು ಕಡಿಮೆಯಾಗಿದ್ದಾರೆ.

ನಾಯಕರ ಪ್ರತಿಷ್ಠೆ: ಜಿಲ್ಲೆಯ ಕಾಂಗ್ರೆಸ್ ಹೈಕಮಾಂಡ್​ನಂತಿರುವ ಆರ್.ವಿ.ದೇಶಪಾಂಡೆ ಅವರ ಕ್ಷೇತ್ರದ ಮೇಲೆಯೇ ಹಾಲಿ ಎಂಎಲ್​ಸಿ ಶ್ರೀಕಾಂತ ಘೋಟ್ನೇಕರ್ ಕಣ್ಣಿಟ್ಟು ಸವಾಲೊಡ್ಡಿದ್ದಾರೆ. ಈ ಎಂಎಲ್​ಸಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿ ತಮ್ಮ ಪ್ರಭಾವವನ್ನು ಸಾಬೀತುಪಡಿಸುವ ಅನಿವಾರ್ಯತೆ ದೇಶಪಾಂಡೆ ಅವರಿಗಿದೆ. ಎಂಎಲ್​ಎ, ಎಂಪಿ, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್​ಗೂ ಜಿಲ್ಲೆಯಲ್ಲಿ ತನ್ನ ಪ್ರಾಬಲ್ಯ ಹಿಡಿದಿಟ್ಟುಕೊಳ್ಳಲು ಈ ಚುನಾವಣೆ ಗೆಲ್ಲುವುದು ಅನಿವಾರ್ಯವಾಗಿದೆ. ದೇಶಪಾಂಡೆ ವಿರುದ್ಧ ತೊಡೆ ತಟ್ಟಿ ಅವರ ಕೋಟೆ ಒಡೆಯುವ ಶಪಥ ತೊಟ್ಟಂತೆ ಕಾರ್ಯನಿರ್ವಹಿಸುತ್ತಿರುವ ಶಿವರಾಮ ಹೆಬ್ಬಾರ ಅವರಿಗೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಕಾಫಿ ಘಮಲು ಸವಿಯಲು ಪ್ರಾಣೇಶ್-ಗಾಯತ್ರಿ ಫೈಟ್

ಚಿಕ್ಕಮಗಳೂರಿನಲ್ಲಿ ಜೆಡಿಎಸ್ ನಡೆ ಇನ್ನೂ ಅಸ್ಪಷ್ಟ

ಚಿಕ್ಕಮಗಳೂರು ವಿಧಾನ ಪರಿಷತ್ ಕ್ಷೇತ್ರ

| ಎ.ಎನ್.ಪ್ರಸನ್ನ ಚಿಕ್ಕಮಗಳೂರು

ಮೇಲ್ಮನೆಗೆ ಎರಡನೇ ಬಾರಿ ಪ್ರವೇಶಿಸಲು ಕಾಫಿ ನಾಡಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತುರುಸಿನ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್​ನ ಗಾಯತ್ರಿ ಶಾಂತೇಗೌಡ ಮೂರನೇ ಬಾರಿ ಸ್ಪರ್ಧಿಸುತ್ತಿದ್ದರೆ, ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಅವರಿಗೆ ಎರಡನೇ ಸ್ಪರ್ಧೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಒಮ್ಮೆ ಗೆದ್ದು, ಎರಡನೇ ಬಾರಿ ಸೋತು ಮತ್ತೆ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ರಾಜ್ಯದ ಏಕೈಕ ಮಹಿಳಾ ಅಭ್ಯರ್ಥಿ ಕಾಂಗ್ರೆಸ್​ನ ಗಾಯತ್ರಿ ಶಾಂತೇಗೌಡ ಅವರನ್ನು ಸೋಲಿಸಿ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಇನ್ನಿಲ್ಲದ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆತ್ಮೀಯ ಭೇಟಿ ಬಿಜೆಪಿಗೆ ಗೆಲುವಿನ ವಿಶ್ವಾಸ ಹೆಚ್ಚಿಸಿರುವುದರ ಜತೆಗೆ ಕುತೂಹಲಕ್ಕೂ ಎಡೆಮಾಡಿದೆ. ಇನ್ನೊಂದೆಡೆ ಬಿಜೆಪಿ ವಿರುದ್ಧ ಉಳಿದೆಲ್ಲ ಪಕ್ಷಗಳೂ ಒಂದಾಗಿ ಕಾಂಗ್ರೆಸ್​ಗೆ ಬಲ ತುಂಬುವ ಪ್ರಯತ್ನ ನಡೆಸಿವೆ.

ಮಾಜಿ ಶಾಸಕ ವೈಎಸ್​ವಿ ದತ್ತ ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಬಹಿರಂಗವಾಗಿ ಹೇಳಿರುವುದಲ್ಲದೆ, ಜೆಡಿಎಸ್​ನ ಹಲವು ನಾಯಕರು ಜಿಲ್ಲೆಯಲ್ಲಿ ಪಂಚಾಯಿತಿ ಮಟ್ಟದ ಸದಸ್ಯರನ್ನು ಭೇಟಿ ಮಾಡಿ ಯಾವ ಅಭ್ಯರ್ಥಿಯನ್ನು ಬೆಂಬಲಿಸಬೇಕೆಂದು ಮೌಖಿಕವಾಗಿ ಹೇಳಿದ್ದಾರೆ. ಈ ನಡುವೆ ದೇವೇಗೌಡರ ಮೋದಿ ಭೇಟಿ ಇದಕ್ಕೆಲ್ಲ ಲಕ್ಷ್ಮಣರೇಖೆ ಎಳೆದಂತಾಗಿದೆ. ಮುಂದಿನ ದಿನದಲ್ಲಿ ಯಾವ ಅಭ್ಯರ್ಥಿ ಬೆಂಬಲಿಸಬೇಕೆಂದು ಸೂಚಿಸಲಾಗುತ್ತದೆಂಬ ವರಿಷ್ಠರ ಹೇಳಿಕೆಯಿಂದ ಸ್ಥಳೀಯ ನಾಯಕರಿಗೆ ಕೊಂಚ ಇರಿಸುಮುರಿಸಾಗಿ ಕೈಕಟ್ಟಿಹಾಕಿದಂತಾಗಿದ್ದರೂ ತೆರೆಮರೆಯ ಕಸರತ್ತು ಮುಂದುವರಿದಿದೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದ್ದು, ಕ್ಷೇತ್ರವನ್ನು ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದಾರೆ. ಮತ್ತೊಂದೆಡೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರದಿಂದ ಮೇಲ್ಮನೆಗೆ ಗಾಯತ್ರಿ ಅವರನ್ನು ಕಳುಹಿಸುವುದು ಕಾಂಗ್ರೆಸ್​ನ ಗುರಿ. ಹಲವು ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿರುವ ಜಿಲ್ಲೆಯನ್ನು ಕೈವಶ ಮಾಡಿಕೊಂಡು ಮುಂಬರುವ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಈ ಚುನಾವಣೆಯನ್ನೇ ಅಡಿಪಾಯವಾಗಿಸಿಕೊಳ್ಳಲು ಮುಂದಾಗಿದೆ. ಆದರೆ ಜೆಡಿಎಸ್ ತೀರ್ವನದ ಮೇಲೆ ಕಾಂಗ್ರೆಸ್​ನ ಲೆಕ್ಕಾಚಾರದ ಏರಿಳಿತ ನಿರ್ಧಾರವಾಗಲಿದೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಜೆಡಿಎಸ್ ಉಪಾಧ್ಯಕ್ಷ ಎಚ್.ಎಚ್.ದೇವರಾಜ್, ತರೀಕೆರೆಯ ಗೋಪಿಕೃಷ್ಣ-ಅನಸೂಯ ದಂಪತಿ ಸೇರಿ ಹಲವು ಮುಖಂಡರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದ ನಾಯಕರ ದಂಡು ಮತಯಾಚಿಸಿದೆ. ಬಿಜೆಪಿ ಪರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತಬೇಟೆ ನಡೆಸಿದ್ದಾರೆ.

ಬೆಂಬಲ ಭರವಸೆಯಷ್ಟೇ: ಜಿಲ್ಲೆಯಲ್ಲಿ 2,431 ಮತದಾರರಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ನಮಗೇ ಹೆಚ್ಚಿನ ಮತದಾರರ ಬೆಂಬಲ ಇದೆ ಎಂದು ಹೇಳಿಕೊಳ್ಳುತ್ತಿ ದ್ದಾರೆ. ಕಾಂಗ್ರೆಸ್ ಬೆಂಬಲಿತರು 2ನೇ ಸ್ಥಾನ ಹಾಗೂ ಜೆಡಿಎಸ್ ಬೆಂಬಲಿತರು 3ನೇ ಸ್ಥಾನದಲ್ಲಿದ್ದಾರೆ. ಜಿಪಂ, ತಾಪಂ, ನಗರಸಭೆ ಸೇರಿದಂತೆ ಹಲವು ಗ್ರಾಪಂ ಸ್ಥಾನಗಳಿಗೆ ಚುನಾವಣೆಯಾಗದೆ 150ಕ್ಕೂ ಹೆಚ್ಚು ಮತದಾರರು ಕಡಿಮೆಯಾಗಿದ್ದಾರೆ. ಇತ್ತೀಚಿನ ಹಲವು ವಿದ್ಯಮಾನಗಳಿಂದ ಜಾತಿ ಲೆಕ್ಕಾಚಾರವೂ ಪರಿಗಣನೆ ಬರುತ್ತದೆ.

ಎರಡನೇ ಗೆಲುವಿಗೆ ಹೋರಾಟ: ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಮೊದಲ ಬಾರಿ ಗೆದ್ದು ವಿಧಾನ ಪರಿಷತ್ ಉಪಸಭಾಪತಿಯಾಗಿದ್ದು ಈಗ 2ನೇ ಬಾರಿ ಪ್ರವೇಶಿಸಲು ಸ್ಪರ್ಧೆ ಯೊಡ್ಡಿದ್ದಾರೆ. ಕಾಂಗ್ರೆಸ್​ನ ಗಾಯತ್ರಿ ಒಮ್ಮೆ ಗೆದ್ದು ಕಳೆದ ಬಾರಿ ಪ್ರಾಣೇಶ್ ಎದುರು ಪರಾಭವಗೊಂಡಿದ್ದರು.

ನೇರ ಪೈಪೋಟಿ: ಐವರು ಕಣದಲ್ಲಿದ್ದರೂ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಪೈಪೋಟಿ ನಡೆಯಲಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಜೆಡಿಎಸ್ ಬೆಂಬಲವೂ ನಿರ್ಣಾಯಕವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net